March 2, 2015

ಚಕ್ಕಡಿಯ ಗಾಡಿ

ಅತ್ತೆಗೂ ಅಮ್ಮನಿಗೂ
ಒಮ್ಮೆ ಒಳ್ಳೆಯವರೆನಿಸಿಕೊಂಡದ್ದಕ್ಕೆ
ಜೀವನದುದ್ದ ಗುದ್ದಾಡಿ ಅದನ್ನೇ ನಿಭಾಯಿಸುವ ಗುರಿಯೊಂದಿತ್ತು
`ನಾನು ಒಳ್ಳೆಯವರಿಗೆ ಒಳ್ಳೆಯವಳು,
ಕೆಟ್ಟವರಿಗೆ ಕೆಟ್ಟವಳು' ಅಂತ ಹೇಳಿಬಿಟ್ಟಿದ್ದೇನೆ
ಅದಕ್ಕಾಗಿ ಒಳ್ಳೆಯವಳಾಗುವ ಪದವಿ,
ಒಳ್ಳೆಯವಳು ಅನ್ನಿಸಿಕೊಳ್ಳಬೇಕೆಂಬ ಅನವಶ್ಯಕ ಹೊಣೆ
ಎರಡೂ ನನಗೆ ಸಿಕ್ಕಿಲ್ಲ :-)

ಹೊಸಿಲು ದಾಟಿದ್ದಾಗಿದೆ
ಚಕ್ಕಡಿ ಓಡಿಸುವವನು ಬಿಟ್ಟುಹೋಗುವುದಿಲ್ಲ
ಮುಂದೆ ಕಟ್ಟಿರುವ ಚಕ್ಕಡಿ ಎಳೆಯುವ ಜೀವಕ್ಕೂ
ನಾನೆಂದರೆ ಇಷ್ಟ
ಕಥೆ ಹೇಳುತ್ತ ಸಾರಥ್ಯ ಮಾಡಿದ ಕಳ್ಳಕೃಷ್ಣ ನೆನಪಾಗುತ್ತಿದ್ದಾನೆ
ಕಥೆ ಕೇಳಿದ ದ್ರೋಣರ ಶಿಷ್ಯ ಅರ್ಜುನನೂ
ಕನಸಲ್ಲಿ ಬಂದ ಏಕಲವ್ಯ
ಪಾಠ ಕಲಿಯುವ ಬಗೆಯನ್ನು ಅರುಹಿಹೋಗಿದ್ದಾನೆ
ಎಲ್ಲಿ ನಿಂತರೂ ಮುನ್ನಡೆಯುವುದನ್ನೂ

ಊರವರ ಹೆಸರಲ್ಲಿ 
ಎಲ್ಲರನ್ನೂ ಪ್ರೀತಿಸಿ, ವಂದಿಸಿ 
ವಹಿಸಿಕೊಂಡ ಜವಾಬ್ಧಾರಿ ಮುಗಿಸಿ ಬಂದಾಗಿದೆ
ಊರಬಾಗಿಲು ತೆರೆದಿದೆ
ಈಗಿನ್ನು ಉಳಿದಿರುವುದು ಅವರ ಪ್ರೀತಿ, ವಂದನೆ
ಸಿಕ್ಕ ತಕ್ಷಣವೇ ಮರಳಿಸಿಬಿಡುವುದು :-)

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.