March 10, 2009

ಜಾಲದ ಜಾಲದಲಿ ಮಗದೊಂದು ಮರಿಚುಕ್ಕಿ...

ನಿನ್ನೆಯತನಕ ಮನೆಯ ಹಿಂದಿನ ಹಸಿರುರೆಂಬೆಗಳು ಪರಸ್ಪರ ಗಾಳಿಹಾಕಿಕೊಳ್ಳುತ್ತಲೇ ಇದ್ದವು. ಇವತ್ತು ಬೆಳಗಾಗುವುದರೊಳಗೆ ಇಡಿಯಮರವೇ ತುಂಡುತುಂಡು.ಯೋಚಿಸುತ್ತಲೇ ನೆಟ್ಟದೃಷ್ಟಿಯನ್ನೇ ಹಿಂಬಾಲಿಸಿ ಬಾಗಿಲಿಂದಾಚೆಗೆ ಮನೆಹೊರಬಂದು ನಿಂತೆ. ಹೊರಗೋಡೆಯ ಮೇಲಿನ ಬಿಸಿಲಜವನಿಕೆಯನ್ನು ಯಾರೋ ಚೂರೇಚೂರು ಸರಿಸುತ್ತಿರುವಂತೆ ಬಿಸಿಲತೆರೆ ಇಷ್ಟಿಷ್ಟೇ ಇಂಚಿಂಚಾಗಿ ಇಳಿದುಬರುತ್ತಲಿತ್ತು. ಇನ್ನೊಂಚೂರು ಈ ಎಳೆಬಿಸಿಲಿಳಿದು ಬಂದಿದ್ದರೆ ಬೆಚ್ಚನೆಯ ಬಿಸಿಲಲ್ಲಿ ನೆನೆಯುತ್ತ, ಬೆಳಗಿನ ಈ ಚಳಿಗೊಂದು ಹದ ಬರುತ್ತಿತ್ತು ಅಂದುಕೊಳ್ಳುತ್ತ ಟೀ ಹೀರುತ್ತ ನಿಂತಿದ್ದೇನೆ. ಮೇಲೆ ನೋಡಿದರೆ ಸೂರ್ಯ ಪದತ್ಯಾಗ ಮಾಡಿದ ಅಧಿಕಾರಿಯ ಹಾಗೆ ಗುಮ್ಮಗಿದ್ದಾನೆ.


ಪಕ್ಕದಮನೆಯ ಅಮ್ಮನಿಗೆ ಇವತ್ತು ಕೋಪ. ಮೂರುವರ್ಷದ ಮಗಳು ‘ಅಮ್ಮಾ’ ಅಂತ ಮೂರುಬಾರಿ ಕರೆದರೂ ಮಾತನಾಡುತ್ತಿಲ್ಲ. ಆ ಮುದ್ದುಕರೆಗೆ ‘ಓ’ಗೊಟ್ಟುಬಿಡಲಾ ಅಂದುಕೊಳ್ಳುತ್ತೇನೆ. ಅತ್ತ ತಿರುಗಿದರೆ ಆ ಮುಂಜಾವಿಗೆ ಅರಳಿದ ಎಳೆಪಕಳೆಯೊಳಗೂ ಅಂಥದೇ ಜಿನುಗು, ಕರೆದೂ
ಕರೆದೂ ಅತ್ತು ಸುಮ್ಮನಾದ ಮಗುವಿನ ಎಳೆಯಕಣ್ಣುಗಳ ಹಾಗೆ. ಈಗ ಆ ಅಮ್ಮನಿಗೂ ‘ಓ’ಗೊಡದೇ ಇರಲಾಗದೇ ಅಗೋ ‘ಹ್ಞೂ... ಬಂದೇ...’ಅಂದೇಬಿಟ್ಟಿದ್ದಾಳೆ. ಖುಷಿಯಲ್ಲಿ ಎರಡುಗುಟುಕಿನಷ್ಟೂ ಚಹ ಒಮ್ಮೆಲೇ ಹೀರುತ್ತೇನೆ. ಯೋಚನೆಗಳೆಲ್ಲೋ ಹಾರುತ್ತವೆ.ಚಹವನ್ನು ಪೂರ್ತಿ ಹೀರುವಷ್ಟರಲ್ಲಿ ಗೋಡೆಯ ಮೇಲಿನ ಬಿಸಿಲು ಗೋಡೆಯಿಂದ ಹರಿದಿಳಿದು ನೆಲದ ಮೇಲೆ ಆವಾರವಾಗುತ್ತಿದೆ.

ಮನಸ್ಸು ಹಿಂದೆಹರಿಯಲಾರಂಭಿಸುತ್ತಿದೆ. ಆವತ್ತೂ ಅಷ್ಟೇ....ಹೀಗೆ ಮನಸ್ಸನ್ನು ಸುಮ್ಮನೆ ತಿರುಗಾಡಲುಬಿಟ್ಟು ಕುಳಿತಿದ್ದೆ. ರಾಜೇಂದ್ರ ಫೋನಾಯಿಸಿ ಇಲ್ಲೊಂದು ಬ್ಲಾಗ್ ಇದೆ, ಅದರ ಲಿಂಕ್ ನಿಂಗೆ ಮೇಲ್ ಮಾಡಿರ್ತೀನಿ, ಆ ಬ್ಲಾಗ್ ನ ಬಲಭಾಗದಲ್ಲಿ ಒಂದೆರಡು ಬ್ಲಾಗ್ ಗಳಿವೆ. ಚೆನ್ನಾಗಿವೆ,
ನೀನು ಓದು’ ಅಂತಂದು ಮೇಲ್ ಕಳಿಸಿದ. ಆ ಬ್ಲಾಗಿನ ಬಲಭಾಗದಲ್ಲಿ ಮೊದಲಿಗೆ ಸಿಕ್ಕಿದ್ದು ಸುಶ್ರುತನ ಬ್ಲಾಗ್. ಓದಿದೆ. ಅದೆಷ್ಟು ಚೆಂದದ ಬ್ಲಾಗ್.
ಊರ ನೆನಪಾಗಿ ಕಣ್ಣೀರು ತುಂಬಿಕೊಂಡು ನನ್ನದೇ ತಮ್ಮನ ಬರಹಗಳಿಗೆ ಪ್ರತಿಕ್ರಿಯಿಸುವ ಹಾಗೆ ಕಣ್ದುಂಬಿಕೊಂಡು ಪ್ರತಿಕ್ರಿಯಿಸಿದೆ.ನಾಗರಪಂಚಮಿಯ ಸಲುವಾಗಿ ಸುಶ್ರುತ ಬರೆದ ಬರಹವನ್ನೋದಿದಾಗ ತಮ್ಮನ ನೆನಪಾಗಿ, ರಾಖಿಹಬ್ಬದಂದು ತಮ್ಮನಿಗೆ ಖುದ್ದಾಗಿ ರಾಖಿ ಕಟ್ಟಲಾಗಲಿಲ್ಲವಲ್ಲ ಅನ್ನುವ ಬೇಸರ ಕಣ್ಣಹನಿಯಾಗಿ ಹರಿದಿಳಿದುಬಂತು. ಕಣ್ಣೊರೆಸಿಕೊಳ್ಳುತ್ತಲೇ ಸುಶ್ರುತನ ಬ್ಲಾಗಿಗೆ ಪ್ರತಿಕ್ರಿಯಿಸಿದೆ. ಹಾಗೆಯೇ ಹರ್ಷ ಭಟ್, ಶ್ರೀನಿಧಿ, ಸಂದೀಪ ನಡಹಳ್ಳಿ ಯವರುಗಳ ಚೆಂದದ ಬ್ಲಾಗುಗಳೂ ಓದಲು ಸಿಕ್ಕಿದ್ದು ಖುಷಿಯಾಗಿತ್ತು.

ಸುಶ್ರುತನ ಬ್ಲಾಗಿನಲ್ಲಿ ಸಿಕ್ಕ ಸಿಂಧಕ್ಕನ ಬ್ಲಾಗ್ ನೋಡಿದಾಗಲಂತೂ ಆದ ಖುಷಿ ಅಷ್ಟಿಷ್ಟಲ್ಲ. ತುಂಬ ದಿನಗಳ ಬಳಿಕ ಚೆಂದದ ಅಕ್ಕಳೊಬ್ಬಳು ದಿಢೀರ್ ಅಂತ ಸಿಕ್ಕಿಬಿಟ್ಟರೆ ಆಗುವಂಥದ್ದೇ ಅನಿರ್ವಚನೀಯ ಭಾವ. ಆ ಅನುಪಮ ಬರಹಗಳು, ಅದರೊಳಗಿನ ಪ್ರತಿಸಾಲುಗಳು ಸೆಳೆವರೀತಿಯ ಝಳಪೆಷ್ಟೆಂದರೆ, ಸಿಂಧು ಅಕ್ಕ ಬರೆದ ಪ್ರತಿಸಾಲುಗಳೂ ‘ನೀನೂ ಬರೆ, ಯತ್ನಿಸು’ ಎಂಬುದಾಗಿ ಓದಿದವರನ್ನು ಹುರಿದುಂಬಿಸುವ ಹಾಗೆ ಅವಳ ಬರಹಬಿಂಬದೊಳಗಿನ ಚುಂಬಕ ಶಕ್ತಿ. ಕೂಗಳತೆಯ ದೂರದಲ್ಲಿ ಎಲ್ಲವೂ ಸಿಕ್ಕಹಾಗೆ ಅವಳ ಬರಹಗಳನೋದುತ್ತಿದ್ದರೆ. ಅದು ಬರಿಯ ಬ್ಲಾಗ್ ಬರಹವಲ್ಲ, ಪುಸ್ತಕ ರೂಪಕೊಟ್ಟರೆ ಅನುಪಮ ಸಾಹಿತ್ಯ.

‘ಸಿಂಧು ಬ್ಲಾಗ್ ನೋಡಿದರೆ ನಂಗೂ ಬರೀಬೇಕು ಅನ್ಸತ್ತೆ’ ಅಂತ ನನ್ನಷ್ಟಕ್ಕೆ ಆಡಿಕೊಳ್ಳುತ್ತ ಕಂಪ್ಯೂಟರ್ ಮುಂದಿಂದ ಎದ್ದಾಗ, ನಾನಾಡಿದ ಮಾತು ಪಕ್ಕದಲ್ಲಿದ್ದ ರಾಜೇಂದ್ರ ಅವರ ಕಿವಿಗೂ ಕೇಳಿಸಿತಿರಬೇಕು. ತಕ್ಷಣವೇ ಅದೇ ದಿನ ಅಂದರೆ, ಅಕ್ಟೋಬರ್ ಎರಡು, ಎರಡುಸಾವಿರದ ಏಳರ ಸಂಜೆ ಬ್ಲಾಗ್ ತೆರೆಯಲಾಯಿತು. ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದವಳಿಗೆ ಕೇಳಿದ, ‘ಏನಾದರೂ... ಟೈಟಲ್ ಹೇಳು’ ಅಂತ. ಒಗ್ಗರಣೆ ಹಾಕುತ್ತ ಹೆಚ್ಚಿಗೇನೂ ಯೋಚಿಸದೇ ‘ನೆನಪು ಕನಸುಗಳ ನಡುವೆ’ ಅಂದೆ. ‘ಹ್ಮ್.....’ ಅಂದವನು ಟೈಪಿಸಿದ. ಮರುದಿನ ಹಳೆಕಡತ ಬಿಚ್ಚಿಟ್ಟುಕೊಂಡು ಸಾಲಾಗಿ ಹಳೆಕಡತವನ್ನೆಲ್ಲ ಬ್ಲಾಗಿನಲ್ಲಿ ಸುರುವುತ್ತ ಬಂದೆ. ಆ ದಿನವೇ ಹರ್ಷಭಟ್ಟರಿಗೆ ರಾಜೇಂದ್ರ ಭಂಡಿಯವರಿಂದ ಒಂದು ಇ-ಮೇಲ್ ರವಾನೆಯಾಯಿತು ಬ್ಲಾಗಿನ ಲಿಂಕ್ ಸಹಿತ. ನನ್ನ ಬ್ಲಾಗಿನ ಪ್ರಥಮ ಓದುಗರೆಂದರೆ (ರಾಜೆಂದ್ರ ಮತ್ತು ನಾನು, ಇಬ್ಬರ ಹೊರತಾಗಿ) ಹರ್ಷ ಭಟ್ಟರು. ಪ್ರಪ್ರಥಮ ಪ್ರತಿಕ್ರಿಯೆ ಕೂಡ ಹರ್ಷಭಟ್ಟರದೇ.

ಹಾಗೆಯೇ ರಾಜೇಂದ್ರ ಭಂಡಿ, ರವಿ ಭಂಡಿ, ಆಶುಮರಿ, ಪೂರ್ಣಿಮಾ ಭಟ್ಟ ಸಣ್ಣಕೇರಿ, ಪ್ರೋಟೋನ್,ತೇಜಸ್ವಿ, ಸುಶ್ರುತ, ಪ್ರಕಾಶ ಹೇಮಾದ್ರಿ, ಮಂಜುನಾಥ್ ಭಟ್ ಮುಂತಾದವರೆಲ್ಲರ ಪ್ರೋತ್ಸಾಹದಿಂದ ಅಷ್ಟಿಷ್ಟು ಗೀಚುತ್ತ, ಚೆಂದ ಚೆಂದದ ಬ್ಲಾಗ್ ಬರಹಗಳನ್ನೆಲ್ಲ ಓದುತ್ತಿರುವಾಗಲೇ ಜ್ಯೋತಿ ಅಕ್ಕ, ಜಗಲಿಭಾಗವತರು, A Paradise of Dreamers, ತ್ರಿವೇಣಿ ಅಕ್ಕ, ವಿಕ್ರಮ ಹತ್ವಾರ್,ಸೀಮಕ್ಕ, Sree ಮತ್ತು ಶ್ರೀ ಮತ್ತು ಶ್ರೀನಿಧಿ, ಸಂದೀಪ ನಡಹಳ್ಳಿ, ಶ್ಯಾಮಾ, ಮನಸ್ವಿನಿ,ಮಾಲಾ, ವಿಕಾಸ, ಹರೀಶ,ಅನ್ನಪೂರ್ಣ ದೈತೋಟ, ಸುನಾಥ ಅಂಕಲ್, ಚೇತನಾ, ಟೀನಾ, ಮೃಗನಯಿನಿ, ಪರಿಸರ ಪ್ರೇಮಿ, ಅಮರ, ಚೆಂಡೆಮದ್ದಳೆ, ಅಲೆಮಾರಿಯ ಅನುಭವ, ಮಂಜುಮುಸುಕಿದ ದಾರಿ, ಮಳೆಹನಿ,ಶಿವ್, ಜೋಗಿಮನೆ, ಮಧು, ತೇಜಸ್ವಿನಿ, ಚಿತ್ರಾ...ಹೀಗೆ ಬ್ಲಾಗಿಂದ ಬ್ಲಾಗುಗಳ ಬೆನ್ನುಹತ್ತಿ ಓದಿದ ದಿನಗಳು ಚೆಂದವೇ ಇದ್ದವು. ಚೆಂದ ಚೆಂದ ಬರಹ ಕೊಟ್ಟು ಓದಲನುವುಮಾಡಿಕೊಡುತ್ತ, ಬರೆದವರನ್ನು ಪ್ರೋತ್ಸಾಹಿಸುತ್ತಲಿದ್ದ ಎಲ್ಲ ಉತ್ಸಾಹಿಬರಹಗಾರ/ಗಾರ್ತಿಯರ ಭರ್ಜರಿಯ ದಿನಗಳವು. ಮತ್ತೆ ಹೊಸ ಹೊಸ ಚೆಂದದ ಬ್ಲಾಗುಗಳ ಸುರಿಮಳೆಯಾಗಿ ನಾವೆಲ್ಲ ಅಂಥ ಚೆಂದದೊಂದು ಕನ್ನಡದ ಬ್ಲಾಗುಗಳ ಮಳೆಯಲ್ಲಿ ತೋಯುತ್ತ ನಲಿಯುತ್ತ, ಆನಂದಿಸುತ್ತಲಿರುವುದೊಂದು ಕನ್ನಡದ ಹೆಮ್ಮೆಯೇ ಸರಿ. ಇಂದೀಗ ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.


ಇದೀಗ ನನ್ನ ಬ್ಲಾಗ್ ಮರಿಯ ವಿಳಾಸ ಬದಲಾಗುತ್ತಲಿದೆ. shantalabhandi.blogspot.com ಇದ್ದಿದ್ದೀಗ shantalabhandi.com ಎಂದಾಗಿದೆ. ಸಧ್ಯಕ್ಕೆ shantalabhandi.blogspot.com ವಿಳಾಸವನ್ನು ಅಷ್ಟು ಸುಲುಭವಾಗಿ ನನ್ನಿಂದ ಬಿಡಲಾಗುತ್ತಿಲ್ಲವಾದ ಕಾರಣ ನಾನೂ ಸಹ ಇದೇ ವಿಳಾಸವನ್ನು ಬಳಸುತ್ತಿದ್ದೇನೆ. ‘ಜೊತೆಯಾಗಿ... ಹಿತವಾಗಿ...’ ನನ್ನನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿರುವವರನೆಲ್ಲ ತೊರೆದು ಬ್ಲಾಗ್ ಮರಿಯನ್ನೆತ್ತಿಕೊಂಡು ಒಂದೇಸಲಕ್ಕೆ ಮನೆಬದಲಾಯಿಸುವ ಕೆಲಸಕ್ಕೆ ಮನವೊಪ್ಪುತ್ತಿಲ್ಲ. ಆದರೆ ತಿಂಗಳೊಪ್ಪತ್ತಿನಲ್ಲಿ ಕೇವಲ shantalabhandi.com ಮಾತ್ರ ಉಳಿಯಬಹುದು. ವಿಳಾಸ ಬದಲಾದ ಮಾತ್ರಕ್ಕೆ ವಿಶೇಷತೆ, ವಿಭಿನ್ನತೆಯ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ ಎಂಬುದು ಪ್ರೀತಿಯ ಎಲ್ಲರಲ್ಲಿ ನನ್ನ ಪುಟ್ಟಮನವಿ. shantalabhandi.blogspot.com ನಲ್ಲಿದ್ದಂತೆ ನಾನು ಮತ್ತೆ ನನ್ನ ಸಪ್ಪೆಬರಹಗಳೊಂದಿಗೆ ಖಂಡಿತ ನಿಮ್ಮೆಲ್ಲರನ್ನು ಕಾದಿರುತ್ತೇನೆ. ಅಲ್ಲಿಗೂ ಬನ್ನಿ. ಎಲ್ಲರನ್ನೂ ಮತ್ತೊಮ್ಮೆ ನೆನೆಯುತ್ತ... ಅನಂತ ಧನ್ಯವಾದಗಳನರ್ಪಿಸುತ್ತ...



ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.