April 26, 2011

ಪವನದೊಳು ತೇಲಿ ಲೀನವಾದೆಯ ಮಡಿಲೆ

ಬರವಿತ್ತು ಇಂದಿಗೆ ಧರೆಗಿಳಿಯದ ಧ್ವನಿಯೇ
ಜಲದ ಬಣ್ಣದಲಿ ಮಾಯ ಮಾಟಗಾತಿ
ರಮಿಸದೇ ಕರಗಿದ ಜಲದಲ್ಲಿ ಬಣ್ಣ
ಕಾಣದ ಆರತಿಯಲಿ, ಆರತಿಯೂ ಆಗದೆಲೆ
ಭಾರ ಇಳಿದು ಹಗುರಾದ ಉದರ

ಮೌನ ಮುಡಿದ ಕಣ್ಣೆವೆಯು ಭಾರ
ಕಣ್ಣೊಳಗೆ ಎಳೆ ತುಳಿದ ಹೆಜ್ಜೆಯ ಛಾಪ
ನೀರೊಳಗೆ ಪುಟಿವ ಪಾದದ ಗುದ್ದು
ಸದ್ದಿಲ್ಲದೆ ಬಿದ್ದ ಚೋಟುದ್ದ ಹೊಸ ಗೆಜ್ಜೆಯೇ
ಇಡದ ಹೆಜ್ಜೆಯಲಿ ನಿನ್ನ ಆಲಿಸುವವರು ಯಾರು?

ಮರುಕಳಿಸುವ ಮೌನಿ ಯುಗಾದಿ
ಸಿಹಿ ಉಣ್ಣದ ಹುಣ್ಣು ಗಾಯ ಒಳಗೆ
ಹೂಚಬ್ಬೆ ಅಂಚಿನಲಿ ಕೇದಿಗೆ ಹೂ
ಮುಡಿಯಲಾಗದೆ ನರಳಿದೆಯಾ ನೀ ಕೇಶರಾಶಿ
ಶ್ವಾಸವೇ ನಿನ್ನುಸಿರ ಕಿತ್ತವರು ಯಾರು?


ಯುಪಿನ್ ಕಡ್ಡಿ ನೋವ ಹೆಣೆಯುತ್ತಲೇ ಇಹುದು
ಖುಲಾವಿಯಾಗದ ನೂಲೊಡನೆ ಮೂಲೆಯೊಳಗೆ
ಹೆಣ್ಣುಗೊಂಬೆಯ ನಗುವು ಮತ್ತೆ ಗಹಗಹಿಸಿ
ಸಾವಿರದ ಬಣ್ಣದಲೂ ಗುಲಾಬಿ ಹೂವು

ಕೇದಿಗೆಯೇ ಯುಗಾದಿ ಕಂಡೆಯ?
ಯುಗಾದಿಯೇ ನೀ ಕೇದಿಗೆಯ ಕೊಂದೆಯ?
ಮೌನ ಯುಗಾದಿ ಕರಗಿದ ಕೇದಿಗೆ
ಉತ್ತರವ ಹುಡುಕೆ ಮೂಕ ಪ್ರಶ್ನೆ


ಕರುಳಲ್ಲಿ ಮೂಡಿ ಅದೃಶ್ಯ ಚಿತ್ರ
ಸಾಂತ್ವನ ಮೀರಿ ಏರಿ ನೋವು
ಪುಳಕಿಸಿದ ನೆನಪು ಕಹಿರಸದ ಕಬ್ಬು
ಯುಗಾದಿಯ ಬರುವು ಗಾಯ ಕೆದಕುವ ಹಾಗೆ

ಹಿಂದೆ ಹೋದಂದು ಕೇದಿಗೆ ಹೂವಿಂದಲೆ
ಯುಗಾದಿಯ ಸಿಹಿ, ಬಣ್ಣದ ಮಡುವಲ್ಲಿ
ಹರಿದರಿದು ಹತ್ತಿಯನು ಕೆದಕಿದೆಯ ಕಣ್ಣೆ
ಬಿಕ್ಕಿದೆಯಾ ಕಣ್ಣೀರೇ ಯಾರು ಅಲ್ಲಿ?

April 24, 2011

ತೆರೆಯುವುದಿಲ್ಲ ನೋವಿಗಿರುವ ತೆರೆಯ

ತೋರಿಕೆಯದಲ್ಲ ನನ್ನೊಳಗಣ ಪ್ರೀತಿ
ಹೇಳಿಕೊಳುವುದಿಲ್ಲ ಯಾರಲೂ ಏನೂ
ಮೌನ ಬೇಲಿಯ ಮಧ್ಯೆ ಬಂಧಿಯಾಗಿಸಿ
ನಗೆ ಹೊದಿಕೆ ಹೊದೆಸಿ ಮಾತಿಲ್ಲದೇ
ದಾಪುಗಾಲಿಕ್ಕಿ ನಡೆದೆಯಲ್ಲಾ ನಿಜ
ತೆರೆಯುವುದಿಲ್ಲ ನೋವಿಗಿರುವ ತೆರೆಯನು

ಈ ಮನವನೇ ಕೈಪಿಡಿಯಾಗಿಸಿ
ಮುಳ್ಳ ಲೇಖನಿಯಲಿ ಗೀಚಿ ಗೀರಿ
ಹಾಳೆಗಳ ನೀ ಕಿತ್ತೆಸೆದೆ ನಿಜ
ಅಳೆಯುವುದಿಲ್ಲ ದುಃಖದಾಳವನು

ಬಣ್ಣದ ಭಾವದಲಿ ಭರದಿ ಬಂದೆ
ನಾ ಬರೆಯಲಿದ್ದಲ್ಲಿ ಅನ್ಯರ ಹಸ್ತಾಕ್ಷರ
ಕಂಡೂ ಕಾಣದ ಪರಿ ಹಿಂದಿರುಗಿದ್ದು ನಿಜ
ಬಿಚ್ಚುವುದಿಲ್ಲ ಬೇಸರವನು

ನೀ ಇರಿದ ಮುಳ್ಳು ಎದೆಯ ಗರ್ಭದಲಿ
ಮೊಳೆತಿದ್ದ ಕನಸುಗಳ ಇರಿದಿದ್ದು ನಿಜ
ಸಹಸ್ರ ಗೀರಿದರೂ ಚೀರುವುದಿಲ್ಲ ನಾನು

ಹುಡುಗಾ ಮನಕಿರುವ ನೀತಿ
ನಯನಗಳಿಗಿಲ್ಲ
ನೋವಾದಾಗೆಲ್ಲ
ಸದೃಶ ಕಂಬನಿ ತುಷಾರದಂದದಲಿ

April 12, 2011

ಬೊಗಸೆಯಲ್ಲಿ...

ಪ್ರೀತಿಯ ಎಲ್ಲರಿಗೆ ನಮಸ್ಕಾರ. ಖುಷಿಯ ಸುದ್ದಿಯೊಂದನ್ನು ಬೊಗಸೆಯಲ್ಲಿ ಹಿಡಕೊಂಡು ನಿಮ್ಮೆಲ್ಲರ ಮುಂದೆ ಧುತ್ತೆಂದು ಬಂದು ಹಂಚೋದಕ್ಕೆ ನಿಂತಿದ್ದೇನೆ. ಈ ಖುಷಿ ಖಾಲಿಯಾದಾಗ ಮತ್ತೆ ಸದಾ ಹಾರೈಸುವ ನಿಮ್ಮೆಲ್ಲರ ಮುಂದೆ ನಿಂತು ‘ಭವತಿ ಭಿಕ್ಷಾಂದೇಹಿ’ ಅನ್ನೋದಕ್ಕೆ ನಂಗೆ ಖುಷಿಯೇ.

ವಿಚಾರ ಏನು ಅಂತ ಹೇಳಿಬಿಡ್ತೇನೆ. ನನ್ನ ಸಾಲುಗಳು(ಕವನಗಳು ಅಂತ ನೀವು ಆವತ್ತು ಕರೆದ ನಾ ಬರೆದ ಅದೇ ಆ ಸಾಲುಗಳು) ಪುಸ್ತಕ ರೂಪಕ್ಕೆ ಬಂದಿವೆಯಂತೆ. ಹೆಸರೇನು ಗೊತ್ತ?

"ಬೊಗಸೆಯಲ್ಲಿ ಬೆಳದಿಂಗಳು"

ಶಿರಸಿ ಕಾಲೇಜಿನಲ್ಲಿ ನನಗೆ ಕನ್ನಡ ಕಲಿಸಿಕೊಟ್ಟ ಪ್ರಿಯ ಪ್ರೊ.ವಿಜಯನಳಿನಿ ಮೇಡಮ್ಮು ಮುನ್ನುಡಿ ಬರೆದು ಹರಸಿದ್ದಾರಲ್ಲದೇ ಪುಸ್ತಕಕ್ಕೆ ಹೆಸರಿಟ್ಟವರೂ ಅವರೇ.
ಅಪಾರ ಅವರು ಚೆಂದದ ಮುಖಪುಟ ರಚಿಸಿಕೊಟ್ಟಿದ್ದಾರೆ. ಮುಖಪುಟದಲ್ಲಿನ ಚಿತ್ರ ಶಾಂತಲಾ ಭಂಡಿ ಅಂದಾಗ ನಿಮಗೆ ಖಂಡಿತವಾಗಿ ನೆನಪಾಗುವ ಪುಟ್ಟಪಾಪುವಿನ ಪಾದಗಳು. ಈ ಚಿತ್ರ ಕೊಟ್ಟವರು ಮಂಜುನಾಥ್ ಭಟ್ (ಹಿತ್ತಲಮನೆ ಗಿರೀಶಣ್ಣ).
ಬೆನ್ನುಡಿಯಲ್ಲಿ ನನ್ನ ಬೈದವರು ನನ್ನ ಪ್ರೀತಿಯ ಜೋಗಿ. ಇವರೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದ.
ಆರಂಭದಿಂದ ಪುಸ್ತಕ ಪ್ರಿಂಟಾಗುವತನಕದ ಜವಾಬ್ಧಾರಿ ಹೊತ್ತ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರಿಗೆ ವಂದನೆ. ಪ್ರಕಾಶಕರಿಗೆ ನಮಸ್ಕಾರ. ಪುಸ್ತಕ ಎಲ್ಲಿ ಸಿಗತ್ತೆ ಅನ್ನೋದು ನಂಗೂ ಸಹ ಗೊತ್ತಿಲ್ಲ. ಪುಸ್ತಕ ಸಿಗೋ ಜಾಗವನ್ನ ಹೇಳೋಕೆ ಮತ್ತೆ ನಿಮ್ಮ ಮುಂದೆ ಬರಲಿದ್ದೇನೆ. ಹರಸಿ ಹಾರೈಸ್ತೀರಲ್ಲ ನೀವೆಲ್ಲ ಅಷ್ಟು ಸಾಕು.

ಪುಸ್ತಕ ಬಿಡುಗಡೆಯೆಲ್ಲಿ ಗೊತ್ತ? ನಿಮ್ಮ ನಿಮ್ಮ ಬೊಗಸೆಯಲ್ಲಿ. ನೀವೇ ನನ್ನೀ ಪುಸ್ತಕವನ್ನು ಬಿಡುಗಡೆಮಾಡುತ್ತೀರಿ. ಧನ್ಯವಾದ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ

April 6, 2011

ನಾನೀಗ ಯಶೋಧೆ

ಜಾತ್ರೆಯ ಜನಪೂರ
ಆಸ್ಪತ್ರೆಯ ಬಾಗಿಲಲ್ಲಿ
ಒಬ್ಬೊಬ್ಬರಾಗಿ ಬಂದು
ಬಿಳೀ ವಸ್ತ್ರದಲ್ಲಿ ಸುತ್ತಿಟ್ಟವನ
ಕಂಡು ನಕ್ಕ ಹೊತ್ತು
ನಿನ್ನೆಯಷ್ಟೇ ಅನ್ನಿಸುವಾಗಲೇ
ಒಂಬತ್ತು ಯುಗಾದಿ ಕಳೆದಿದೆ

ಥೇಟು ಅಪ್ಪನೇ
ಅಲ್ಲಲ್ಲ ಅಜ್ಜ
ಅಜ್ಜಿಯದೇ ಹೋಲಿಕೆ
ಅಲ್ಲದಪ್ಪ ಅಪ್ಪಚ್ಚಿಯದು
ಅಲ್ಲಿಯೇ ಹೊರಳಲಾಗದೇ ಮಲಗಿದ್ದ
ನನ್ನ ಹೋಲಿಕೆ!
ಇಲ್ಲದೆಯೂ ಇರಲಿಕ್ಕೆ ಸಾಕು
ನವಮಾಸ ಭರ್ತಿ ಹೊತ್ತಿದ್ದಷ್ಟೇ
ಭಾಗ್ಯ
ಈ ಜನವೆಲ್ಲ ಸರಿದು ತೊಟ್ಟಿಲಲವನ
ಮುಖವೊಮ್ಮೆ ಕಂಡಿದ್ದರೆ
ಇದ್ದೀತು ನನ್ನ ಹೋಲಿಕೆ ಸ್ವಲ್ಪವಾದರೂ

ಎಲ್ಲ ಅರ್ಥವಾದಂತೆ ಅತ್ತೆ ಹತ್ತಿರ ಬಂದು
ಹಣೆಸವರಿ
ನಿನ್ನದೇ ಹೋಲಿಕೆ
ಗಲ್ಲ ತುಟಿಯೆಲ್ಲ ನಿನ್ನದೇ
ಕಣ್ಣು ಹಣೆ ಅವರಪ್ಪನದು
ಅಂದ ಮೇಲೆಯೇ
ಸಮಾಧಾನದ ನಿದ್ರೆ

ಎಚ್ಚರಾದಾಗ ನಾನು ನಾನಲ್ಲ
ನಾನು ಯಶೋಧೆ
ದೀಪ ಹಚ್ಚಿಟ್ಟು
‘ಅನುದೀಪ...’ ಎಂದರೆ...

ಅವನೆಲ್ಲಿ ಅವನೆಲ್ಲಿ
ದೇವಕಿಯನರಸಿ ಹೋದನೇ
ಇಲ್ಲಿದ್ದೇನೆ ಬಾರೋ
ನಾನು ದೇವಕಿ
ಸರಿಯಾಗಿ ನೋಡು ಕಂದಾ
ಯಶೋಧೆಯೂ ನಾನೇ

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.