August 20, 2010

ಮಧ್ಯಾಹ್ನದ ಸಾರು

ಮುಗಿಲುಬಿದ್ದು ಮಳೆಯಾದ ದಿನಗಳಲ್ಲೋ, ಮಾಗಿಯ ಚಳಿಯಲ್ಲೋ, ಜಿಮುರು ಹನಿಯಲ್ಲೋ, ಬೆಳಗಿನ ಇಬ್ಬನಿಯಲ್ಲೋ ನಿನ್ನ ಪರಿಚಯವಾಗಿದ್ದರೆ ಖಂಡಿತ ಅದು ಪರಿಚಯವಾಗಿರದೇ ಪ್ರೀತಿಯಾಗೇ ಹೋಗುತ್ತಿತ್ತು. ಸುಡು ಬೇಸಿಗೆ ಮಧ್ಯಾಹ್ನ ನೀನು ಸಿಕ್ಕ ಗಳಿಗೆ ನಾನು ಒಗ್ಗರಣೆಗೆ ಕಬ್ಬಿಣದ ಹುಟ್ಟೊಳಗೆ ಎಣ್ಣೆ ಕಾಯಿಸಿಟ್ಟ ಹೊತ್ತು. ನೀನು ಯಾರು ಅಂತ ನನಗೆ ಗೊತ್ತಾದದ್ದು. ಅಲ್ಲಿಯತನಕವೂ ಅವರೆಲ್ಲರಿಗೆ ಏನು ಗೊತ್ತಿತ್ತೋ ಅದನ್ನೇ ನನಗೆ ಹೇಳಿದ್ದು, ನನಗೂ ಗೊತ್ತಾದದ್ದು. ಎಣ್ಣೆ ಆರಲುಬಿಟ್ಟು ನಿನ್ನ ಗುರುತು ಹಿಡಿದೆ ಅಂದರೆ ನೀನು ನನಗೆ ಬೇಕಾದ ವ್ಯಕ್ತಿ ಅನ್ನುವಷ್ಟು ಗೊತ್ತಿತ್ತು.

ದಿನಕಳೆದ ಹಾಗೆ ಗೊತ್ತಾದ್ದೆಂದರೆ ನನಗೂ ನಿನಗೂ ಸೂರ್ಯ ಚಂದ್ರರಿಗಿರುವಷ್ಟು ಅಂತರವಿದೆಯೆಂಬುದು. ನಿನ್ನ ರಾತ್ರಿಗಳನ್ನೆಲ್ಲ ಬಗೆದು ನನ್ನ ಹಗಲಾಗಿಸಿಕೊಂಡೆ ಅಂದುಕೊಂಡೆ. ಬರಬರುತ್ತ ನೀನು ಹಗಲಿಗೂ ಬಿಜಿಯಾಗತೊಡಗಿ ರಾತ್ರಿಪಾಳಿಯ ಕೆಲಸಗಳೆಲ್ಲ ನನಗೇ ಬಿದ್ದವು. ನಾನು ಯಾವತ್ತೂ ನಿಶಾಚರಿಯೇ ಆದರೂ ನಿನ್ನ ಹಾಗೆ ಹಗಲುರಾತ್ರಿಗಳಲ್ಲಿ ಸಿಕ್ಕ ಹೊತ್ತನ್ನೆಲ್ಲ ಬದುಕಿಗೆ ಚಕ್ರವಾಗಿಸಿಕೊಂಡು ಬದುಕನ್ನೆಳೆಯುವುದು ಗೊತ್ತಿರಲಿಲ್ಲ. ಸಿಕ್ಕಹೊತ್ತನ್ನೆಲ್ಲ ಸುಮ್ಮನೇ ಹೇರಿಕೊಂಡು ಭಾರವಾಗಿಸಿಕೊಂಡು ಬಾಗಿಹೋಗಿದ್ದೆ. ಅದಕ್ಕೇ ಇರಬೇಕು ತೂಕವನ್ನಿಷ್ಟು ಇಳಿಸಿಕೊಂಡು ಸ್ವಲ್ಪ ದಿನ ಹಗುರಾದೆ ಅಂದುಕೊಂಡೆ. ನೀನು ಬೆಳೆಯುತ್ತ ಹೋದೆ.

ನೀನು ಮಾತ್ರ ಅರ್ಥವಾಗಲೇ ಇಲ್ಲ. ಅರ್ಥವಾದಷ್ಟೂ ನಿಗೂಢವಾದೆ. ಈಗಷ್ಟೇ ಕುದಿಯುತ್ತಲಿದ್ದ ನೀರು ಆ ಕ್ಷಣಕ್ಕೆ ತಣ್ಣಗೆ ಆರಿದ ಹಾಗೆ, ನೀನು ತಣ್ಣಗೋ, ಬಿಸಿಯೋ ಗೊತ್ತುಪಡಿಸಲೇ ಇಲ್ಲ. ಒಮ್ಮೆ ಅಮ್ಮನಂಥ ಮಮತೆಯಾದರೆ, ಇನ್ನೊಮ್ಮೆ ಅಪ್ಪನಂತೆ ಬೆಚ್ಚಗೆ. ಒಮ್ಮೆ ನೀನ್ಯಾರೂ ಅಲ್ಲದ ಹಾಗೆ. ನೀನೆಂದರೆ ಬಲು ಸೋಮಾರಿ ಅಂತ ನಾನು ಬಯ್ಯುವ ಹೊತ್ತಿಗೆ ನೀನು ಬಿಜಿಯಾಗಿರುತ್ತಿದ್ದೆ. ನೀನು ನಿದ್ರಿಸುವುದೇ ಇಲ್ಲ ಅಂತ ದೂರುವ ಹೊತ್ತಿಗೆ ನೀನು ಕಣ್ಮುಚ್ಚಿದ ಸದ್ದು. ನೀನು ನಿಶಾಚರಿ ಅಂದರೆ ನೀನು ಹಗಲೂ ನಿದ್ರಿಸುವುದಿಲ್ಲ ಅಂತ ನನಗೆ ಗೊತ್ತಿರಬೇಕು. ಅಂತೂ ನೀನು ಅರ್ಥವಾಗಲೇ ಇಲ್ಲ.

ಸಾರು ಮಾಡಿಟ್ಟು ‘ಪ್ಲೀಸ್ ಒಂದು ಒಗ್ಗರಣೆ’ ಅಂದರೆ ನೀನು ಆ ಕ್ಷಣಕ್ಕೆ ರೆಡಿ. ಒಗ್ಗರಣೆಯ ಘಮಕ್ಕೆ ಸುಮಾರು ಮಂದಿ ಅಡುಗೆ ಚೆನ್ನಾಗಿದೆ ಅಂತ ಹೇಳಿದ ದಿನಗಳನ್ನು ನೀನು ಮರೆತರೂ ನಾನು ಕೃತಜ್ಞಳು. ಎಷ್ಟೋ ದಿನ ನೀನು ಇವತ್ತೊಂದು ಸಾರು ಮಾಡು ಅಂತ ನಾನು ಪೀಡಿಸಿದ್ದೇನೆ. ಅದಕ್ಕಾಗಿ ಕ್ಷಮಿಸು. ಆದರೂ ನೀನು ಮಾಡಿದ ಸಾರು ಇವತ್ತಿಗೂ ನನಗೆ ಪ್ರೀತಿ. ಎಷ್ಟೋ ಸರ್ತಿ ಕೆಟ್ಟದಾಗಿ ಒಗ್ಗರಣೆ ಕೊಟ್ಟ ಭಾಗ್ಯ ನನ್ನದು. ಸಲ್ಲಿಸಿಕೊಂಡ ಮಮತೆ ನಿನ್ನದು. ನೀನು ಅರ್ಥವಾಗದೇ ಹೋದರೂ, ಅರ್ಥವಾಗದೇ ಇದ್ದರೂ.

ಅಂಗಳದಲ್ಲಿಳಿಯಬೇಕು, ಕೆಸರು ಬೇಕು ಅಂದಾಗ ಸಿಗದ ಕೆಸರು ಕಾಡು ಹಾದಿಯಲ್ಲಿ ನಡೆಯುವಾಗಲಾದರೂ ಮುಂದೊಮ್ಮೆ ಸಿಕ್ಕಿತು. ಸಾಕು ಬಿಡು. ಅಂಗಳದ ಬೆಳದಿಂಗಳು ಕಾಡುತ್ತಿದೆ, ಬೆಳದಿಂಗಳು ಸರಿದುಹೋಗದ ಹಾಗೆ ಚಪ್ಪರ ಹಾಕಿಸಯ್ಯ, ನನಗೆ ಬೆಳದಿಂಗಳು ಬೇಕು, ಬೆಳದಿಂಗಳಾಗಬೇಕು ಅಂತ ಅಂಗಲಾಚಿದರೆ ಊರಿದ್ದೂರೇ ಬೆಳದಿಂಗಳ ಕಾಣುವ ಹಾಗೆ ಮಾಡಿದೆಯಲ್ಲ, ಅಷ್ಟು ಸಾಕು. ನೀನು ಅರ್ಥವಾದಂತೆ.

ನಾನು ನಿನಗೇನಾಗಬೇಕು ಅಂತ ನೀನು ಕೇಳಿದ ದಿನಗಳಲ್ಲಿ ನನಗೆ ಅನ್ನಿಸಿದ್ದು ಮಾತ್ರ ಇಷ್ಟೇ. ಏನೂ ಆಗದ, ಏನೂ ಆಗದೇ ಇರುವ ಸಂಬಂಧವಿದ್ದರೆ ಅದು ನಮ್ಮದು. ಇದಕ್ಕೂ ಮಿಕ್ಕಿ ಸಂಬಂಧವಿಲ್ಲದೇ ಇರುವ ಇಬ್ಬರನ್ನು ಬೇರೆಬೇರೆಯೇ ಗುರುತಿಸಿ ಇರದ ಸಂಬಂಧಕ್ಕೆ ಸಿಗದ ಬೆಲೆ ಅರ್ಥವಾದ ಹೊತ್ತಿಗೆ ನಾನು ನಿನಗೆ ಮಗಳಾಗಿರಬೇಕು ಅನ್ನಿಸಿದ್ದು ಸುಲಭದ್ದಲ್ಲ. ಆ ಹೊತ್ತಿಗೆ ನೀನು ಎಲ್ಲ ಸಂಬಂಧಗಳನ್ನು ಮೀರಿ ಬೆಳೆದಿರುತ್ತೀಯ, ಮಗಳೆ ಅನ್ನುವ ಹೊತ್ತಿಗೆ ನಾನು ಇನ್ನೊಂದು ತೀರದಲ್ಲಿರಬೇಕು ತಿರುಗಿ ನೋಡಲಾಗದಿರುವಷ್ಟು ಅನ್ನುವುದಿಷ್ಟೇ ಆಸೆ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.