December 24, 2014

ಮರೆವಿನೊಳಗಿನ ಅರಿವು

ಹೀಗೊಂದು ದಿನ
ಮನೆ ಬಿಟ್ಟದಾರಿ
ಆ ಮನೆಗೂ ಕೀಲಿ
ಕರೆಗಂಟೆ ಕೂಗಿ
ಆಕೆ ಬಾಗಿಲ ತೆರೆದು
ಒಳಗಡಿಯಿಟ್ಟೆ
ಹಿಂದೊಮ್ಮೆ ಗುಡಿಸಿ ರಂಗೋಲೆಯಿಟ್ಟ
ಚಿಕ್ಕ ಚೊಕ್ಕ ಮನೆ

ಎಲ್ಲ ಹಾಗೆಯೇ ಇದೆ
ನನ್ನ ಜಾಗಕ್ಕಿವಳ ಬಿಟ್ಟರೆ!
ಬದಲಾವಣೆಯೇ ಇಲ್ಲ
ಚಪ್ಪಲಿ ಬಿಡಲೂ ಜಾಗವಿಲ್ಲ
ಅವಳ ಜೋಡು ಅಲಂಕರಿಸಿಬಿಟ್ಟಿದೆ

ಒಳಗಿಣುಕಿ ನೋಡಿದರೆ
ಜಾಗವೇ ಇಲ್ಲ
ಅವಳದೇ ಎಲ್ಲ!!
ಹೊಟ್ಟೆ ಉರಿ ಉರಿದು
ಸುಡುವಾಗಲೇ ಕೇಳಿದೆ
"ನೀನ್ಯಾರೆ ಈ ಮನೆಗೆ
ಎಲ್ಲ ಆಕ್ರಮಿಸಲು?
ಆಣತಿಯಿತ್ತವರು ಯಾರು ನಿನಗೆ?"

ಹೇಳಿದಳು
"ನಾವು ಇತ್ತೀಚೆಗೆ ಬಂದ ಬಾಡಿಗೆದಾರರು
ಇಲ್ಲಿ ಮೊದಲಿದ್ದವರು ನೀವೆಯೋ ಹೇಗೆ?"
ತಣ್ಣಗೆ ಅವಳು ನಕ್ಕಾಗಲೇ ಸಣ್ಣಗಾದೆ
ಸಣ್ಣಗೆ ಉಲಿದೆ
"ಹೌದು...ಈ ಮನೆ ಖಾಲಿ ಮಾಡಿ
ಹೊಸಮನೆಗೆ ಹೋದೆವು
ತಿಂಗಳಾಚೆಯ ಹಿಂದೆಯೇ..." ಎಂದು.

December 1, 2014

ಸಂದರ್ಶನ

ಎಷ್ಟೆಲ್ಲ ಪ್ರಶ್ನೆಗಳಿವೆ ಕೇಳುವುದಕ್ಕೆ
ಸಿದ್ಧನಾಗಿರು ಬಾಣ ಬತ್ತಳಿಕೆಯೊಂದಿಗೆ
ಹುಣ್ಣಿಮೆಯ ವೇದಿಕೆಯಲ್ಲಿ ಚಂದ್ರನಿರಲಿಲ್ಲ ಯಾಕೆ?
ಮಿಂಚಿದ ತಾರೆಗಳ ಲೆಕ್ಕವೆಷ್ಟು?
ಬೆಳದಿಂಗಳನ್ಯಾಕೆ ಅಡಗಿಸಿಟ್ಟೆ? ಮಿಂಚುವ ತಾರೆಗಳು ಕಾಣಲೆಂದೆ?
ಚುಟುಕು ಪ್ರಶ್ನೆಗಳು ಭಾರವಾಗಿರುತ್ತವೆಯೇನು?
ಉತ್ತರವಿಲ್ಲದ ಸಂದರ್ಶನವಿದು ಗೊತ್ತು,
ಸಿಕ್ಕಿದರೂ ಉತ್ತರ ಏನೆಂಬುದೂ ಗೊತ್ತು
ಕೊನೆಗೊಂದು ಪ್ರಶ್ನೆ
ಇಷ್ಟಕ್ಕೂ ನೀನು ಪ್ರೀತಿಸಿದ್ದು ರಾಣಿಯನ್ನೋ?
ಅಥವ ಅವಳ ಹೆಸರನ್ನೋ? 

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.