April 23, 2009

ಸಾವಿರದ ಸಾಸಿವೆಯಲಿ ಸಾವಿರದೊಂದು...

ನಾನು ತುಂಬ ಅಂಟಿಕೊಂಡಿದ್ದ ಆ ಕಣ್ಣುಗಳು ಮತ್ತೆ ನನಗೆ ಕಾಣಸಿಗುತ್ತಾವೆಂಬ ಭರವಸೆಯಿರಲಿಲ್ಲ. ಅಲೆಮಾರಿ ಕಣ್ಣು ಅವಿತಿಟ್ಟುಕೊಳ್ಳುವುದೆಂತು. ನನ್ನೆದುರು ಬಂತು.

‘ನೀನ್ಯಾರು?’ ಅಂತ ಕೇಳಿದರೆ...
‘ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅಲೆಮಾರಿ ನಾನು. ನಾನೇ ತಿಳಿಯದ ನಾನು ನಾನು.’ ಗೌತಮ ಉತ್ತರಿಸಿದ್ದಿಷ್ಟು.

‘ ಓ ಅಲೆಮಾರಿ, ನಿನಗೆ ಹಾಡಲು ಬರತ್ತ?’ ಅಂತ ಕೇಳಿದರೆ...
"ನಿನ್ನ ಕಣ್ಣ ಕೊಳದ ಒಳಗೆ
ಕನಸ ಮೀನು ನನದು ಕಣೆ.
ಎದೆಯ ತುಂಬ ಅವಿತು ಕುಳಿತ
ನೂರು ಆಸೆ ನಿನದೆ ಕಣೆ
ಬಾಳ ತುಂಬ ಒಲವು ಸುರಿವ
ನವಿರು ನಂಟು ನಮದು ಕಣೆ"
ಅಂತ ತಾನೇ ಬರೆದಈ ಹಾಡನ್ನು ಹಾಡುವಾಗ ಆ ಕಣ್ಣುಗಳು ಯಾರನ್ನೋ ಅರಸುವಂತೆ ಭಾವಸ್ಫುರಿಸುತ್ತವೆ.

‘ನೀ ಬುದ್ಧನೇನೋ?’ ಅಂತ ಕೇಳಿದರೆ ಸಾವಿರದ ಮನೆಯ ಸಾಸಿವೆ ಕಾಳಿನ ಬಗ್ಗೆಯೂ ಮಾತನಾಡುತ್ತಾನೆ.
‘ಬರೆಯೋಕೆ ಬರತ್ತೇನೋ ಗೌತಮ ಬುದ್ಧ?’ ಅಂತ ಕೇಳಿದರೆ...
"ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿಹ ನಾನು" ಅಂತ ತಾನೇ ಬರೆದ ಈ ಹಾಡನ್ನು ಎಲ್ಲೋ ನೋಡುತ್ತ ಹಾಡುತ್ತಾನೆ.
ಇವ ಬುದ್ಧನಲ್ಲ, ಕಿಂದರಜೋಗಿಯೇನೋ ಅನಿಸಿಬಿಡುತ್ತದೆ.

ಇವ ಯಾರು ಅಂತ ದಯವಿಟ್ಟು ಕೇಳಬೇಡಿ. ಇವ ಯಾರು ಅಂತ ನನಗೂ ಗೊತ್ತಿಲ್ಲ. ನಾನು ಈ ಭುವಿಗೆ ಬಂದಹಾಗೆಯೇ ಇವನೂ ಬಂದಿರಬಹುದು. ವಯಸ್ಸಲ್ಲಿ ನನಗಿಂತ ಸಾಕಷ್ಟು ಚಿಕ್ಕವನಾದರೂ ದೊಡ್ದವನಿರಬೇಕು ಅಂತ ಮನಸು ಸುಮ್ಮ ಸುಮ್ಮನೆ ಹೇಳುತ್ತದೆ. ನಾನು ನಂಬುವುದಿಲ್ಲ.
‘ಖಾಲಿ ಬಿದ್ದ ನನ್ನೆರಡು ಬ್ಲಾಗುಗಳಿವೆ, ಒಂದರಲ್ಲಿ ಏನಾದರೂ ಗೀಚುತ್ತೀಯ?’ ಅಂತ ಕೇಳಿದೆ. ‘ನನಗೇನೂ ತೊಂದರೆ ಇಲ್ಲ, ಓದುವವರಿಗೆ ತೊಂದರೆಯಾಗಬಹುದು ಅಷ್ಟೇ.’ ಎನ್ನುತ್ತ ತಲೆಕೆರೆದುಕೊಳ್ಳುತ್ತಾನೆ. ‘ಇಲ್ಲ ಕಣೋ, ನಾ ಗೀಚಿದ್ದನ್ನೇ ಎಷ್ಟೆಲ್ಲ ಪ್ರೀತಿಯಿಂದ ಓದುತ್ತಾರೆ ಇವರೆಲ್ಲ, ನೀ ಬರೆದದ್ದನ್ನೂ ಸಹ ಹೇಗಿದ್ದರೂ ಒಪ್ಪಿಸಿಕೊಳ್ಳುವಂಥಹ ಹಿರಿಮೆ ಅವರದು’ ಅಂದೆ. ಒಪ್ಪಿಕೊಂಡ.

ನನ್ನ ಪ್ರೀತಿಯ ನೀವುಗಳೇ...
ನಾನು ಪ್ರೀತಿಯಿಂದ ಪ್ರೀತಿಸಿದ ಒಂದುಸಾಲಿಗಾಗಿ ಒಂದು ಬ್ಲಾಗನ್ನೇ ತೆರೆದಿಟ್ಟುಬಿಟ್ಟಿದ್ದೆ. ಅದನ್ನೀಗ ಅಲೆಮಾರಿಯೊಬ್ಬ ಮುಂದುವರೆಸುತ್ತಾನೆ. ‘ಅಲೆಮಾರಿಯ ಬರಹಗಳ ಮಧ್ಯೆ ಮತ್ತಿವಳ ಬರಹಗಳನ್ನು ಅಲ್ಲಿಯೂ ಓದಬೇಕಾ?’ ಅಂತ ದಯಮಾಡಿ ಯೋಚಿಸಬೇಡಿ. ಭರವಸೆ ಕೊಡುತ್ತೇನೆ, ನಾನು ಇನ್ನುಮುಂದಲ್ಲಿ ಬರೆಯುವುದಿಲ್ಲ. ನಾನಾಯಿತು, ನನ್ನ ಪಾಡಾಯಿತು ಅಂತ ನನ್ನ ‘ನೆನಪು ಕನಸುಗಳ ನಡುವೆ’ ಇದ್ದುಬಿಡುತ್ತೇನೆ. ಅಲೆಮಾರಿ ಅಲೆಯುತ್ತ ಅಲ್ಲಿಗೆ ಬರಬಹುದೆಂಬ ಕಾರಣಕ್ಕೇ ನಾನಲ್ಲಿ ಬರೆದದ್ದನ್ನೆಲ್ಲ ಯಾವತ್ತೋ ಗುಡಿಸಿ ಒರೆಸಿಬಿಟ್ಟಿದ್ದೇನೆ. ಇನ್ನಲ್ಲಿ ಅವನು ಬರೆಯುತ್ತಲಿರುತ್ತಾನೆ, ಅಲೆಯುತ್ತ ಎಲ್ಲಿ ನಡೆದರೂ ಮರಳಿ ಅಲ್ಲಿಗೆ ಮರಳುತ್ತಾನೇನೋ ಎಂಬ ಭರವಸೆ ಅವನ ಮೇಲಿದೆ.

‘ಏನಪ್ಪಾ? ಇದೆಂಥ ಕತೆ? ಅಷ್ಟೆಲ್ಲ ಪ್ರೀತಿಸಿದ ಒಂದುಸಾಲಿಗಾಗಿ ತೆರೆದಿಟ್ಟ ಇಡಿಯ ಬ್ಲಾಗನ್ನು ಗೊತ್ತುಗುರಿಯಿಲ್ಲದ ಅಲೆಮಾರಿಗೆ ಕೊಟ್ಟುಬಿಟ್ಟಳಲ್ಲ! ಇವಳ್ಯಾವ ಸೀಮೆಯವಳು?’ ಅಂತ ಯೋಚಿಸ್ತಿದ್ದೀರ? ಅವನ್ಯಾರು ಅಂತ ನಾನು ಹೇಳದೇ ಇರುವ ಕಾರಣವಿಷ್ಟೇ. ಅವನಿನ್ನೂ ಚಿಕ್ಕವನು. ಅವನ್ಯಾರೆಂಬುದು ಇನ್ನೂ ಗೊತ್ತಾಗಬೇಕಿದೆ. ಅಷ್ಟರೊಳಗೆ ಅವನ್ಯಾರು ಅಂತ ನಾನು ನಿಮಗೆ ಹೇಳುವುದಾದರೂ ಏನನ್ನು?

ನಿಮ್ಮೆಲ್ಲರ ಹಾರೈಕೆ, ಒಂದಿಷ್ಟು ಪ್ರೀತಿ, ಒಂದು ಹಿಡಿ ಪ್ರೋತ್ಸಾಹವೇ ಸಾಕಾಗಬಹುದು ಅವನಿನ್ನು ಬರೆಯುವುದಕ್ಕೆ. ಅವನ ಹಾರೈಸುವಿರ?

ಅವನ ಬರಹಗಳನ್ನು ನಾನೂ ಓದಿಲ್ಲ. ಬೇರಿನ ಮೇಲಿಟ್ಟ ಪ್ರೀತಿಯೇ ಮೊಳಕೆಯ ಮೇಲೂ ಇರುವ ಹಾಗೆ. ಪ್ರೀತಿ, ಮಮತೆಯ ಜೊತೆ ಒಂದು ಭರವಸೆ. ಆ ಭರವಸೆ ಹುಸಿಯಾಗದಿರಲಿ. ಬುದ್ಧನಾಗದೆ, ಅಲೆಮಾರಿಯೂ ಅಲ್ಲದೆ ಅವನು ಗೌತಮನಾಗಿಯೇ ಗುರುತಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ...

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.