January 19, 2010

ಹಾಗಾದರೆ... ಏನಿರಬಹುದು?

ಪ್ರೀತಿ ಎಂದರೆ
ಮಾತಲ್ಲ
ಮೌನವೂ ಅಲ್ಲ
ಏಕೆಂದರೆ ಪ್ರೀತಿ ಎಂದರೆ
ಅರ್ಥವೂ ಅಲ್ಲ
ಸಮ್ಮತಿಯೂ ಅಲ್ಲ

ಪ್ರೀತಿ ಎಂದರೆ
ತನ್ನೊಳಗಿನ ಪಿಸುಪಿಸು
ಮತ್ತೊಬ್ಬರ ಗುಸುಗುಸು
ಪ್ರೀತಿ ಎಂದರೆ
ನಂಬಿಕೆ
ಆದರೆ ವಿಶ್ವಾಸವಲ್ಲ

ಪ್ರೀತಿ ಎಂದರೆ
ಮೋಸ
ಆದರೆ ವ್ಯಭಿಚಾರವಲ್ಲ
ಪ್ರೀತಿ ಎಂದರೆ
ಕಲ್ಪನೆ
ಆದರೆ ಭ್ರಮೆಯಲ್ಲ

ಪ್ರೀತಿ ಎಂದರೆ
ಇಬ್ಬರ ಸ್ವಂತದ
ಒಂದೇ ವಾಹನ
ಪ್ರೀತಿ ಎಂದರೆ
ಸರಾಗ ಪಯಣದ
ಜೊತೆಜೊತೆ ಕಾಲ್ನಡಿಗೆ

ಪ್ರೀತಿ ಎಂದರೆ
ಯಾರೋ ಬರೆದಿಟ್ಟ
ಸಂಭಾಷಣೆಯಲ್ಲ
ಪ್ರೀತಿ ಎಂದರೆ
ಬ್ರೆಕೆಟ್’ನಲ್ಲಿ ಬರೆದಿಡಬೇಕಾದ
ಇಬ್ಬರ ಸ್ವಗತ

ಪ್ರೀತಿ ಎಂದರೆ
ಬರಿಯ
ವ್ಯಾಕರಣದ ನಾಮಪದವಲ್ಲ
ಪ್ರೀತಿ ಎಂದರೆ
ಸಕ್ರಿಯ
ಕ್ರಿಯಾಪದ

ಪ್ರೀತಿ ಎಂದರೆ
ಆಗಮ ಸಂಧಿ
ಲೋಪಸಂಧಿ
ಆದರೆ ಪ್ರೀತಿ ಎಂದರೆ
ಆದೇಶಸಂಧಿ
ಅಲ್ಲವೇ ಅಲ್ಲ

ಪ್ರೀತಿ ಎಂದರೆ
ಸದಾ
ಜೋಗುಳವಲ್ಲ
ಪ್ರೀತಿ ಎಂದರೆ
ಎಗ್ಸಾಮ್ ದಿನದ
ನಸುಕಿನ ಅಲಾರ್ಮ್

ಪ್ರೀತಿ ಎಂದರೆ
ಅಮ್ಮ ಐರನ್ ಮಾಡಿದ
ನಮ್ಮ ಸೆಲ್ವಾರ್ ಅಲ್ಲ
ನಾವೇ ಇಸ್ತ್ರಿ
ಮಾಡಬೇಕಾದ
ಅಪ್ಪನ ಶರ್ಟು

January 13, 2010

ಬೆಳದಿಂಗಳ ಬೇರು

ಅಂದೆಂದೋ ಸುತ್ತ ತಿರುಗುತ್ತ ತನ್ನದಲ್ಲದ ಕಥೆಗಳನ್ನು ತನ್ನದೇ ಶೈಲಿಯಲ್ಲಿ ಹೇಳುತ್ತ ‘ಮುಂದೆ ಕೇಳು ಅಜ್ಜಾ ಸುದ್ದಿ’ ಎನ್ನುವಾಗಲೆಲ್ಲ ಎನ್ನುತ್ತ ಏನೂ ಹೇಳದೇ ಬರೀ ಪ್ರಶ್ನೆಗಳನ್ನೇ ಕೇಳುವ ಆ ವೈಖರಿಗೆ ವಕೀಲವೃತ್ತಿಯೇ ಸರಿ ಎನ್ನುವ ನಿರ್ಧಾರಕ್ಕೆ ಬರುವಷ್ಟರಲ್ಲಿ ಅಡಕತ್ತರಿಗೆ ಅಡುವಾಗಿ ಕುಳಿತ ಅಡಿಕೆ ಚೂರು ಚೂರಾಗಿತ್ತು. ಯೋಚನೆಗೆ ಹಚ್ಚುವ ಅದೇ ಪ್ರಶ್ನೆಗಳು ಬೆಳೆಯುತ್ತ ಬೆಳೆಯುತ್ತ ತಮ್ಮೊಳಗಿನ ದಿಟ್ಟತನವನ್ನೆಲ್ಲ ಒಂದೆಡೆ ಜೋಡಿಸಿಟ್ಟು ನವಿರಾದ ಬೆಳದಿಂಗಳೇ ತಾನು ಎನ್ನುವ ನವಿರು ಧೈರ್ಯವನ್ನು ಸುತ್ತ ಇಬ್ಬನಿಯಂತೆ ಚಿಮುಕಿಸಬಲ್ಲವು ಎಂಬ ವಿಷಯ ಎಳೆಯ ವೀಳ್ಯದೆಲೆ ಮಾತ್ರ ಅಗಿಯುವ ಮಟ್ಟಿನ ವಯಸ್ಸಾದಾಗಲೇ ಅರಿವಾದ್ದು.

ಹೊಸತಾಗಿ ಮೊನ್ನೆಯಷ್ಟೇ ತಂದುಕೊಟ್ಟ ಕೆಂಪಿಕಾರನ್ನು ಅವ ಮಂಚದ ಕಾಲಿಗೆ ಕಟ್ಟಿ ‘ಎಮ್ಮೆ ಕಟ್ಟಿದ್ದೇನೆ, ಹತ್ತಿರ ಬರಬೇಡಿ, ಹೊರುತ್ತದೆ’ ಅಂದಾಗ ಇವಗಿನ್ನೂ ಎರಡೇ ವರ್ಷ ಅಂತ ಸುಮ್ಮನಾದದ್ದೇ ಎಡವಾಗಿದ್ದು. ಹಸು ಎಮ್ಮೆಗಳನ್ನು ಪ್ರೀತಿಸುವ ಮನುಷ್ಯ ನಾಳೆ ದೊಡ್ಡ ಕೊಟ್ಟಿಗೆಯನ್ನೇ ಕಟ್ಟಿಯಾನು, ಅದಾದರೂ ಸರಿ, ಯಾವತ್ತೂ ಒಳಿತಾಗಿದ್ದರೆ ಸಾಕು ಎಂದುಕೊಳ್ಳುತ್ತ ಗಲ್ಲಾ ಏರಿ ಕೂತು ಕಾಸು ಎಣಿಸುತ್ತ ಇದೀಗ ಇಪ್ಪತ್ತು ವರ್ಷದ ಮೇಲೂ ಅಂಥದೇ ಕಲ್ಪನೆಗಳು.

ಅವಳೂ ಬೆಳದಿಂಗಳಂತೆ, ಅವಳಿಗಿನ್ಯಾರೊ ಚಂದ್ರಮ. ಸಾಗರದಾಚೆ ಸಾಗುವಷ್ಟರಲ್ಲಿ ಪ್ರಶ್ನೆಗಳನ್ನೆ ಉತ್ತರವಾಗಿಸಿಕೊಂಡು ಸುಮ್ಮನಾದವಳು, ‘ನಾಳೆ ಬರ್ರುತ್ತೇನೆ ಅಜ್ಜಾ’ ಎಂದು ಸುಮ್ಮನೆ ಸಾರಿ ಸಾಗಿ ಹೋದವಳು.
ಇತ್ತ ತಿರುಗಿದರೆ ಇವ ತಾನೂ ಚಂದ್ರನೇ ಎನ್ನುತ್ತಾನೆ, ತನ್ನ ಸುತ್ತೆಲ್ಲ ಇರುವುದು ಬೇರೆಯದೇ ಬೆಳದಿಂಗಳು, ‘ಗುಡ್ ನೈಟ್’ ಹೇಳುವಾಗೆಲ್ಲ ಸುತ್ತ ಆವರಿಸುತ್ತಾಳೆ ಎನ್ನುವ ಕನವರಿಕೆ ಸದಾ ಅವನದು.

ಮುಂದಿನದೆರಡು ಹಲ್ಲುಮುರಕೊಂಡ ಹೊತ್ತಿನಲ್ಲೆ ಅವನನ್ನೆತ್ತಿಕೊಂಡು ಫೋಟೋ ತೆಗೆಸಿಕೊಳ್ಳಬೇಕಾದೀತು ಅಂತ ಅವಳಿಗೂ ಗೊತ್ತಿರಲಿಲ್ಲ. ಅವಳ ತೊಡೆಯ ಮೇಲೆ ಕೂತು ಹಲ್ಲಿಲ್ಲದ ಬಾಯಲ್ಲಿ ನಕ್ಕವನು ತಾನೇ ಎನ್ನುವುದು ಅವನಿಗೂ ಗೊತ್ತಿರಲಿಕ್ಕಿಲ್ಲ. ಅವಳಾವುದೋ ಊರಿನ ಬೆಳದಿಂಗಳಾಗಿ, ಇವನ್ಯಾವುದೋ ಸೀಮೆಯ ಚಂದ್ರನಾಗಿದ್ದಕ್ಕೆ ಅಜ್ಜನಾಗಿ ಯೋಚಿಸುವಾಗ ಖುಷಿಯಾಗುತ್ತದೆ ಅಂತ ಯಾರಮುಂದೆಯೂ ಹೇಳಲಾಗದೇ ಕಾಣದ ಎರಡೂ ಕಣ್ಣುಗಳು ಹನಿಯಾಗುತ್ತಿವೆ. ಮಳೆನೀರು ಮನೆಯೊಳಗೇ ಪರದೆಯಾದಂತ ಮಸುಕು.

ಸಮುದ್ರದಾಚೆಯಿಂದ ‘ಹುಣ್ಣಿಮೆಯ ಕರೆಯೋಲೆ ಬೆಳದಿಂಗಳಿರುವಿನಲಿ ನನ್ನಿನಿಯ ಚಂದ್ರಮಗೆ ಮದುವೆಯಂತೆ’ ಅಂತ ಅವಳು ಗೀಚಿಟ್ಟ ಸಾಲಿಗೆ ಎಂಟುವರ್ಷ ಚಿಕ್ಕದಾದ ಮತ್ತೊಂದು ಮನಸ್ಸು ಟ್ಯೂನ್ ಹಾಕುತ್ತದೆ. ಯಾವುದು ಎಂತಾದರೂ ಸರಿ, ಫೋನಲ್ಲಿ ಕೇಳಿದ್ದು ಮಾತ್ರ ಗಂಧರ್ವ ಗಾನವೆನಿಸುತ್ತಿದೆ ಮುದಿಯ ಮನಸ್ಸಿಗೆ. ದೂರದ ಧ್ವನಿ ‘ಹೆಂಗಿದ್ದು ಅಜ್ಜಾ, ನಾ...ನಿನ್ನ ಮೊಮ್ಮಗಳು ಬರದ್ದಿ, ನಿನ್ನ ಮೊಮ್ಮಗ ಟ್ಯೂನ್ ಹಾಕಿದ್ದ’ ಅಂದರೆ ಗಂಟಲು ಕತ್ತರಿಸಿಹೋದ ಖುಷಿ ಒಂದು ನಿಟ್ಟುಸಿರಿನಲ್ಲಿ. ಆಚೆಯ ಮನಸ್ಸುಗಳಿಗೆ ಈ ನೆಮ್ಮದಿ ಸ್ವಲ್ಪವೇ ತಿಳಿದರೂ ಸಾಕು, ಅಜ್ಜನಾದ್ದಕ್ಕೆ, ಮೊಮ್ಮಕ್ಕಳನ್ನು ತಲೆಮೇಲೆ ಕೂರಿಸಿಕೊಂಡು ಆವತ್ತು ಮೆರೆದದ್ದಕ್ಕೆ, ಅವರಾಡಿದ್ದಕ್ಕೆಲ್ಲ ಸೊಪ್ಪುಹಾಕುತ್ತ ಅವರ ಬಲಕ್ಕೆ ನಿಂತ ಸಲುವಾಗಿ ಮಕ್ಕಳಿಂದ ಮಾತುಕೇಳಿದ್ದಕ್ಕೂ ಸಾರ್ಥಕ.
ಹಣ್ಣುಬಿಡಲಿ ಅಂತ ನೆಟ್ಟ ಹಿತ್ತಲಿನ ದಾಳಿಂಬೆಯ ಗಿಡ ಹೂಬಿಡುತ್ತಿದೆ. ಹಣ್ಣಿಲ್ಲದಿದ್ದರೂ ಬೆಳಗ್ಗೆದ್ದರೆ ದೇವರಿಗೆ ಹೂ ಆಯಿತೆಂಬ ಸಮಾಧಾನ ನಮ್ಮೊಳಗಿರಬೇಕಷ್ಟೇ. ಬೆಣ್ಣೆ ಗಿಡಹಾಕಿ ಹಣ್ಣುಬಿಡದೇ ನೋಯುವುದಾಗಲಿಲ್ಲ ಎನ್ನುವ ಸಮಾಧಾನ ಮುದಿಯ ವಯಸ್ಸಿಗೆ ಮತ್ತು ಮನಸ್ಸಿಗೆ ಸಿಕ್ಕರೆ ಇವತ್ತಿನ ತನಕ ಬದುಕಿದ್ದಕ್ಕೂ ಸಾರ್ಥಕ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.