March 20, 2008

ಮರಳುವ ಮೊದಲು

ನಾ ಕಲಿತ ವಿಶ್ವವಿದ್ಯಾಲಯದ ನೆನಪು ಇಂದು ಮರುಕಳಿಸುತ್ತಿದೆ. ಸುಂದರ ಮುಂಜಾವು. ತಿಳಿಗುಲಾಬಿ ಬಣ್ಣದ ಅಂಚಿಗೆ ಹಾಲಿನ ಬಣ್ಣದ ಮೈಯ್ಯುಳ್ಳ ಸೀರೆಯೊಂದನ್ನು ಕಷ್ಟಪಟ್ಟು ಸುತ್ತಿಕೊಂಡು ಹೊರಟಾಗ ಯಾವುದೋ ಕಂಪನ ಮೈಯನ್ನ ಆವರಿಸಿತ್ತು. ತಿರು ತಿರುಗಿ ನಕ್ಕ ಹಾಸ್ಟೆಲ್ ರೂಂ ಮೇಟ್ ಹೇಳಿದ್ದಳು "ಸಿಂಪಲ್ಲಾಗೇ ಸೆಳೆದುಬಿಡ್ತೀಯ" ಅಂತ ನಕ್ಕಿದ್ದಳು. ಅವಳನ್ನೊಮ್ಮೆ ಗುರಾಯಿಸಿ ‘ತಮಾಷೆ ಸಾಕು’ ಅಂತ ನಸುನಕ್ಕು ಸೆಮಿನಾರ್ ಬಗೆಗಿನ ನನ್ನ ಟೆನ್ಷನ್ ಅವಳೆದುರು ಹೇಳಿಕೊಂಡು ಸುಮ್ಮನೆ ನಡೆದಿದ್ದೆ.
ವಿಶ್ವವಿದ್ಯಾಲಯದಲ್ಲಿನ ಗೆಸ್ಟ್ ಹೌಸ್ ಪಕ್ಕದ ಕಾನ್ಫರೆನ್ಸ್ ಹಾಲ್ ಭಾರತದ ಸುಮಾರು ೬೦ ವಿಶ್ವವಿದ್ಯಾಲಯಗಳಿಂದ ನೆರೆದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಧ್ಯಾರ್ಥಿಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು.
ನಮ್ಮ ವಿಶ್ವವಿಧ್ಯಾಲಯದಿಂದ ‘ಜ್ಯೂನಿಯರ್ ಜಿಯಾಗ್ರಫರ್’ ಅಂತ ಆಯ್ಕೆಯಾಗಿದ್ದ ನಾನು ಕಾನ್ಫರೆನ್ಸಿನ ಮೊದಲ ದಿನವಾದ ಅಂದು ಸೆಮಿನಾರ್ ಕೊಡುವುದಿತ್ತು. ಅದೆಷ್ಟೋ ದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಸೆಮಿನಾರ್ ಅರ್ಧಗಂಟೆಯಲ್ಲಿ ಮುಗಿದೇ ಹೋಗಿದ್ದು ಮನ್ಸೆಲ್ಲ ಖಾಲಿ ಖಾಲಿ ಅನಿಸಿತ್ತಾದರೂ ‘ಹೇಗಿತ್ತೋ ಏನೋ’ ಎಂದು ಭಯವೂ ಸುತ್ತಿಕೊಳ್ಳುತ್ತಲಿತ್ತು. ಸೆಮಿನಾರ್ಗೆ ನನ್ನನ್ನು ಸಿದ್ಧಗೊಳಿಸಿದ ನನ್ನ ಪ್ರೀತಿಯ ಗುರುವರ್ಯರ ಕಣ್ಣಿನ ಪ್ರೀತಿಯನ್ನ ಅರಸಿ ಅವರು ಸ್ಟೇಜಿನ ಮೇಲಿದ್ದುದರಿಂದ ದೂರದಿಂದಲೆ ಮುಗುಳ್ನಗೆಯೊಂದರಿಂದ ವಂದಿಸಿ ಚಹದ ಕಪ್ ಒಂದನ್ನು ಕೈಯಲ್ಲಿ ಹಿಡಿದು ಕಾನ್ಫರೆನ್ಸ್ ಹಾಲ್ ಇಂದ ಹೊರಗೆ ಬಂದು ಮೆಟ್ಟಿಲೊಂದರ ಮೇಲೆ ಕುಳಿತೆ. ಅರ್ಧಗಂಟೆಕಾಲ ಕಟ್ಟಿಹೋದಂತಿದ್ದ ಉಸಿರಿಗೆ ಸ್ವಾತಂತ್ರ್ಯ ಸಿಕ್ಕಿತ್ತು .
ಆಗಲೇ ಅವನು ಬಂದು ಎಷ್ಟೋ ದಿನದ ಪರಿಚಯವೆಂಬಂತೆ ಪಕ್ಕಕ್ಕೆ ಕುಳಿತಿದ್ದ. "ಸೆಮಿನಾರ್ ಚೆನ್ನಾಗಿತ್ತು" ಅಂದ. ಉಸಿರು ತಾಕುವಷ್ಟು ಪಕ್ಕ ಬಂದು ಕುಳಿತಿದ್ದವನಿಗೆ ಉತ್ತರಿಸಲು ಸ್ವಲ್ಪ ಮುಜುಗರವಾಯ್ತಾದರೂ ಮುಗುಳ್ನಕ್ಕೆ. ಕೊಂಚ ಭಯ ಕೂಡ. ಆತ್ಮೀಯತೆ ಕೂಡ ಇಣುಕಲಿಲ್ಲ ಅವನು ನನಗೆ ತೋರಿಸಿದಷ್ಟು .ವಿಷಯವೆಂದರೆ ಅವನು ಭಾರತೀಯನಾಗಿರಲಿಲ್ಲ,

ತಾನು ಭೂಗೋಳಶಾಸ್ತ್ರ ವಿಷಯದ ರಿಸರ್ಚ್ ವಿಧ್ಯಾರ್ಥಿಯಾಗಿದ್ದು ನಾನಂದು ಸೆಮಿನಾರ್ ಕೊಟ್ಟ ವಿಷಯವೇ ಅವನ ರಿಸರ್ಚಿನ ವಸ್ತುವೆಂದೂ ತಿಳಿಸಿದ. ಆ ವಿಷಯದ ಅಧ್ಯಯನದ ಸಲುವಾಗಿ ಕಿರು ಅವಧಿಗಾಗಿ ತಾನು ಭಾರತಕ್ಕೆ ಬಂದಿರುವುದಾಗಿಯೂ ಹೇಳಿದನಲ್ಲದೆ ಅದೇ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿದ ಅವನ ಮಾತುಗಳಿಗೆ ಸ್ಪಂಧಿಸುವಷ್ಟು ಜ್ಞಾನ ನನ್ನದಾಗಿರಲಿಲ್ಲ. ಅಲ್ಲದೆ ಐದು ನಿಮಿಷಗಳ ಕಾಲ ಉಸಿರಾಡಿಕೊಳ್ಳಲು ಹೊರಬಂದವಳನ್ನು ಅವನು ಹದಿನೈದು ನಿಮಿಷಗಳ ಕಾಲ ಹೊರಗೆ ನಿಲ್ಲಿಸಿಬಿಟ್ಟಿದ್ದ. ಒಳಗೊಳಗೇ ಚಡಪಡಿಸುತ್ತಿದ್ದವಳನ್ನು ಅರ್ಥೈಸಿಕೊಂಡವನಂತೆ ಮುಗುಳ್ನಕ್ಕು ‘ಕಾರ್ಯಕ್ರಮದತ್ತ ತೆರಳೋಣ ಬಾ’ ಎಂದವನೇ ಕಾನ್ಫರೆನ್ಸ್ ಹಾಲ್ ಒಳಗೆ ನುಸುಳಿ ಮಾಯವಾಗಿದ್ದ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅಂತೂ ಹತ್ತು ದಿನಗಳ ವರ್ಕ್ ಶಾಪ್ ಮುಗಿಯುವುದರೊಳಗೆ ಹಿಂದೆಯೇ ಸುಳಿದಾಡುತ್ತ ಮುಗುಳ್ನಗುತ್ತಿದ್ದವನು ತನ್ನ ಮನದಿಚ್ಛೆಯನ್ನೆಲ್ಲ ಮುಂದಿಟ್ಟು ಕ್ರಮೇಣ ಮನವನಾವರಿಸಿಕೊಂಡುಬಿಟ್ಟಿದ್ದ. ಆರು ತಿಂಗಳು ಕಾಲ ನಮ್ಮ ಡಿಪಾರ್ಟ್ ಮೆಂಟಿನಲ್ಲಿಯೇ ರಿಸರ್ಚ್ ಸಲುವಾಗಿ ನಿಂತಿದ್ದ. ನನ್ನಿಷ್ಟದ ವಿಷಯದ ಬಗ್ಗೆ ಅವನಿಗಿರುವ ಅತೀವ ಜ್ಞಾನ ಹಾಗೂ ಆಸಕ್ತಿ ನನ್ನನ್ನು ಅವನೊಂದಿಗೆ ಕಟ್ಟಿಹಾಕಿಬಿಟ್ಟಿತ್ತು. ನನ್ನ ಜಾತಿಯ ಯಾವ ಹುಡುಗನಿಗೆ ಇವನು ಕಮ್ಮಿ? ಅಂತನಿಸಿಬಿಟ್ಟಿದ್ದ. ಎಲ್ಲಕ್ಕೂ ಮಿಗಿಲಾಗಿ ಅವನ ಸರಳತೆ, ಒಳ್ಳೆಯತನ ನನ್ನನ್ನು ಪೂರ್ತಿ ನುಂಗಿಕೊಂಡುಬಿಟ್ಟಿತ್ತು.
ಮನೆಯಲ್ಲಿ ವಿಷಯವಿಟ್ಟೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದರೊಳಗೆ. ಮನೆಯಲ್ಲಿ ಯಾರೂ ಒಪ್ಪಲಿಲ್ಲ ಮಾಂಸ ತಿನ್ನುವ ಅದರಲ್ಲೂ ಪರದೇಸಿಗನೊಬ್ಬನನ್ನು ಮದುವೆಯಾಗಲು.
ಅವನು ತನ್ನ ದೇಶಕ್ಕೆ ಹೊರಟು ನಿಂತಾಗ ನಾನವನೊಂದಿಗೆ ಹೊರಟು ನಿಂತದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವನೂ ಸಹ ನನ್ನನ್ನು ಬಿಟ್ಟು ಹೋಗಲಾರೆನೆಂದು ಹಠ ತೊಟ್ಟಿದ್ದ. ಏನೇನೋ ಕೊಸರಾಡಿ ಪಾಸ್ಪೋರ್ಟ್ ಅಲ್ಲಿ ಅವನ ಬಾಳಸಂಗಾತಿಯೆನಿಸಿಕೊಂಡ ನಾನು ವಿಸಾ ಪಡೆದವಳು, ನನ್ನವರು ಎಂಬ ಎಲ್ಲರನ್ನು ತೊರೆದು ಅವನೊಂದಿಗೆ ಹಾರಿ ಅವನ ನೆಲದಲ್ಲಿ ಬಂದಿಳಿದಿದ್ದೆ.

ಈ ಮಾತಿಗೆ ಎರಡು ವರ್ಷಗಳೇ ಸಂದುಹೋದವು. ಇಂದು ಬೆಳಿಗ್ಗೆ ಅವನಿಂದ ಡಿವೋರ್ಸ್ ಸಿಕ್ಕಿತು. ಕಾರಣ ನೀವಂದುಕೊಂಡಂತೆ ಅವನಿಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇಲ್ಲ. ಭಾರತೀಯಳಾಗಿ ಹೇಳಬೇಕೆಂದರೆ ಅವನು "ಶ್ರೀರಾಮಚಂದ್ರ."

ಮೊದ ಮೊದಲು ಪ್ರೀತಿಯೆದುರು ಕೊರತೆಗಳ್ಯಾವುವೂ ಕಾಣಿಸಲಿಲ್ಲ. ಜೀವನ ನಾನಂದುಕೊಂಡಷ್ಟು ಕಷ್ಟವಿಲ್ಲವೆನಿಸಿದ್ದಂತೂ ನಿಜ. ಆದರೆ ನಿಜವಾದ ಕೊರತೆಯೊಂದಿತ್ತು ನನಗೆ ನಾನೇ ತಂದಿತ್ತುಕೊಂಡಿದ್ದು, ನನ್ನ ಪ್ರೀತಿಯ ಕುಟುಂಬವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ, ಅವರೊಂದಿಗೆ ಫೋನಾಯಿಸಿ ಮಾತನಾಡುವ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದು ದಿನ ಕಳೆದ ಹಾಗೆ ಬೃಹದ್ ಕೊರತೆಯಾಗಿ ನನ್ನನ್ನ ನರಳಿಸತೊಡಗಿದ್ದು, ಎಷ್ಟೆಂದರೆ ಹುಚ್ಚಿಯಾಗಿಬಿಡುವಷ್ಟು.

ಕಾರಣಗಳು ವೈಯಕ್ತಿಕ. ಅವು ನಮ್ಮಿಬ್ಬರ ವೈಯಕ್ತಿಕ ಅಂತಲೂ ಅನಿಸೋಲ್ಲ. ನನ್ನೊಬ್ಬಳ ವೈಯಕ್ತಿಕ ಅನಿಸುತ್ತವೆ. ಅವನು ಇನ್ನೂ ನನ್ನನ್ನು ಆರಾಧಿಸುತ್ತಾನೆ ಅಂತ ಗೊತ್ತಿದೆ. ನನ್ನಲೂ ಅಷ್ಟೆ, ಗೋಪುರದಷ್ಟು ಪ್ರೀತಿಯಿದೆ ಅವನಿಗಾಗಿ. ಕಳಚಿರದ ಕೊಂಡಿಯನ್ನು ಕಡಿದುಕೊಂಡು ಬರಬೇಕಿದೆ.
ಅಪ್ಪ-ಅಮ್ಮನ ನೆನಪು ಬೆಳಕಿನ ಕಿರಣಗಳ ಜೊತೆ ಹುಟ್ಟಿಕೊಂಡರೆ ಚಂದ್ರ ಮಾಯುವತನಕವೂ ಮಾಗುವುದಿಲ್ಲ. ಸಂಜೆ ದೇವರಿಗೆ ನಾನಂಟಿಸಿದ ದೀಪ ಅವನು ಬಂದ ತಕ್ಷಣ ಅವನ ಕೈಲಿರುವ ಫೈಲು ಅಪ್ಪಳಿಸುವ ರಭಸಕ್ಕೆ ಮುರುಟಿ ಆರಿ ಹೋದ ಕಮಟು ನನ್ನೊಳಗಿಳಿದು ಮುಸು ಮುಸು ಅಳುತ್ತದೆ. ವಾರಾಂತ್ಯಗಳಲ್ಲಿ ಅವನ ತಂದೆ-ತಾಯಿಗಳ ಜೊತೆ ಅವರ ಮನೆಯಲ್ಲಿ ಕಳೆಯುವುದು ನರಕ ಅಂತ ನಾನೇನೂ ಹೇಳುತ್ತಿಲ್ಲ. ಮೀಟಿನ ಕಮಟು ನನ್ನ ತರಕಾರಿಗಳ ರುಚಿಯನ್ನೂ ನುಂಗಿ ವಾರಾಂತ್ಯ ಪೂರ್ತಿ ಉಪವಾಸ ನರಳುತ್ತೇನೆ. ಸದಾ ಊಟದ ತಟ್ಟೆಯೊಂದಿಗೆ ಚಾಕು-ಫೋರ್ಕುಗಳನ್ನು ನೋಡುವಾಗ ಅಜ್ಜನ ಊಟದ ಬಟ್ಟಲಿನ ಎಡಗಡೆಯಲ್ಲಿರುತ್ತಿದ್ದ ತೀರ್ಥದ ತಟ್ಟೆಚಮಚಗಳು ಕಣ್ಣೆದುರು ಬಂದು ಕಂಬನಿ ಹನಿಸುತ್ತವೆ.
`ಪ್ರೀತಿ ಗೆಲ್ಲುತ್ತದೆ' ಎಂಬ ಮಾತನ್ನು ನಂಬಿ ಎಲ್ಲರನ್ನು ತೊರೆದು ಬಂದಿದ್ದೆ. ಈಗನ್ನಿಸುತ್ತದೆ ಪ್ರೀತಿಯನ್ನು ಗೆದ್ದರೆ ಎಲ್ಲವನ್ನೂ ಸೋಲಬೇಕಾಗುತ್ತದೆ ಅಂತ.
ಅವನು ನನ್ನೊಡನೆ ಬರಲಾರ, ಅವನಿದ್ದರೆ ನನ್ನವರು ನನ್ನನ್ನು ಸುತಾರಾಂ ಸೇರಿಸೋಲ್ಲ. ಇದೇ ಕಾರಣಗಳಿಂದ ಹಿಂದೊಮ್ಮೆ ಹುಟ್ಟಿದ ಮಾತು ಇಂದು ಡಿವೋರ್ಸ್ ಅಲ್ಲಿ ಅಂತ್ಯಗೊಂಡಿತು. ಈಗೊಂತರ ಮನುಷ್ಯ ಮುಟ್ಟಿದ ಗುಬ್ಬಿಯ ಹಾಗಾಗಿ ಬಿಟ್ಟಿದ್ದೇನಾದರೂ ಮರಳಿ ಬಂದು ನನ್ನವರನ್ನೆಲ್ಲ ಕೂಡಿಕೊಳ್ಳುವ ತವಕ ಹೆಚ್ಚುತ್ತಿದೆ. ನನ್ನವರೆಲ್ಲ ನನ್ನ ಸೇರಿಸಿಕೊಂಡಾರು ಎಂಬೊಂದು ಚಿಕ್ಕ ಆಸೆಯಿದೆ. ಅವರನ್ನೆಲ್ಲ ಬರಸೆಳೆದು ಅಪ್ಪಿಕೊಂಡು ಕ್ಷಮೆಯಾಚಿಸಿ ಬಿಕ್ಕುವ ಕನಸೊಂದಿದೆ.
ನನ್ನ ನೆಲದಲ್ಲಿಯೇ ಹೋಗಿಳಿದು ಆ ಮಣ್ಣಿನಲ್ಲಿಯೇ ಮಲ್ಲಿಗೆ ಬಳ್ಳಿಯೊಂದನ್ನು ನೆಟ್ಟು ಹೂ ಬಿಡಿಸಿ ನನ್ನವರನ್ನೆಲ್ಲ ಕರೆದು ತೋರಿಸಿ ನಗುವ ಹಂಬಲ ವಿಪರೀತ ಕಾಡುತ್ತಿದೆ. ಎಷ್ಟೆಂದರೆ ನನ್ನ ಬದುಕಾದ ನನ್ನ ಡ್ಯಾನಿಯೊ ಎಂಬ ಮರುಳು ಹುಡುಗನನ್ನು ತೊರೆದು ಬರುವಷ್ಟು.

ಡಿವೋರ್ಸ್ ಸಿಕ್ಕ ಮೆಲೂ ಅವನು ನನ್ನನ್ನು ಕಾಡುವಂತೆ ನಿಟ್ಟುಸಿರುಬಿಡುತ್ತಿದ್ದಾನೆ. ಕೈಯೊಡ್ಡಿ ಬೇಡಿಕೊಳ್ಳುತ್ತಿದ್ದಾನೆ. ಕಣ್ನೋಟದಲ್ಲೇ ‘ಬಿಟ್ಟು ಹೋಗ್ತೀಯಾ?’ ಅಂತ ಗೋಗರೆಯುತ್ತಾನೆ.ನನ್ನನ್ನು ಅಲುಗಿಸಿ ಅಲುಗಿಸಿ ಕೇಳುತ್ತಾನೆ ‘ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿದ್ದೇನೆ ಹೇಳು, ತಿದ್ದಿಕೊಳ್ಳುತ್ತೇನೆ’ ಅಂತ. ಬಾಯಿಬಿಟ್ಟು ಹೇಗೆ ಹೇಳಲಿ ನಿನ್ನ ಬದುಕಿನ ರೀತಿ-ನೀತಿಗಳು ನಂಗಿಷ್ಟವಾಗ್ತಿಲ್ಲ’ ಅಂತ! ‘ಮಾಂಸ ತಿನ್ನೋದು ಡಿವೋರ್ಸ್ ಮಾಡುವಂಥ ತಪ್ಪಾ’ ಅಂತ ನನ್ನನ್ನ ಕೆಳಗಿಟ್ಟು ನೋಡಿದರೆ! ‘ನಂಗೆ ನನ್ನವರೆಲ್ಲರ ಜೊತೆಯಲ್ಲಿರಬೇಕೆನ್ನಿಸುತ್ತೆ, ಬರ್ತೀಯಾ?’ ಅಂತ ಮಾತ್ರ ಕೇಳಿ ಸುಮ್ಮನಾಗುತ್ತೇನೆ. ಕುಳಿತಲ್ಲೇ ಕೂರಲಾರದೇ ಚಡಪಡಿಸಿ ಕೈಯಲ್ಲಿನ ಫೈಲನ್ನೇ ಮುಖಕ್ಕೆ ಮುಚ್ಚಿಕೊಳ್ಳುತ್ತಾನೆ, ಹಾಗಾಗಿ ಅವನ ಕಣ್ಣೀರು ನನಗೆ ಕಾಣಿಸುತ್ತಿಲ್ಲ.
ಸಮಂಜಸ ಕಾರಣವೇ ಇಲ್ಲದಾಗ್ಯೂ ಸುಳ್ಳು ಕಾರಣ ನೀಡಿ ಡಿವೋರ್ಸ್ ಪಡೆವಾಗ ತಪ್ಪು ತನ್ನದಿದೆ ಅಂತ ನನಗಾಗಿ ಒಪ್ಪಿಕೊಂಡವನ ಮುಖ ಎದುರು ಬಂದು ನನ್ನ ಕೆನ್ನೆಗೇ ನಾನು ನಾಲ್ಕು ರಪ ರಪನೆ ಬಾರಿಸಿಕೊಳ್ಳುವಂಥ ಗಿಲ್ಟ್ ಕಾಡುತ್ತದೆ. ಅಲ್ಲೂ ನನ್ನ ಪರವಾಗಿದ್ದು ನನ್ನನ್ನು ತನ್ನೊಳಗೆ ಉಳಿಸಿಕೊಂಡವನು ಗ್ರೇಟ್ ಅನಿಸಿ ಅವನೊಳಗೆ ಹುದುಗಿ ಕಳೆದುಹೋಗೋಣವೆನಿಸಿದರೂ ನನ್ನೂರು ನನ್ನವರೆಲ್ಲ ಎದುರಿಗೆ ಬಂದು ಕೈಗಳನ್ನು ಚಾಚಿ ನನ್ನನ್ನು ತಮ್ಮೆಡೆಗೆ ಬಾಚಿಕೊಂಡಂತೆ ಭಾಸವಾಗುತ್ತದೆ.

ತೆರಳಲಿದ್ದೇನೆ ನನ್ನ ನಾಡಿಗೆ.ಇದೇ ತಿಂಗಳು ೨೮ನೆಯ ತಾರೀಖಿನಂದು ನಿತ್ಯವೂ ನನ್ನ ದೇಶಕ್ಕೆ ಮರಳುವ ವಿಮಾನವೊಂದು ನನಗಾಗಿ ಕಾಯುತ್ತಿರುತ್ತದೆ ಎನಿಸುತ್ತಿದೆ.

ಸಮಯಗಳ ಅಂತರದಲ್ಲಿ ಕಳೆದುಕೊಂಡ ನನ್ನವರೆಲ್ಲರೂ ನನಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಮೇಲೆ ಅಪ್ಪ-ಅಮ್ಮರೊಂದಿಗೆ ನಿನ್ನೆ ಮಾತಾಡಿದೆ.
ಅಮ್ಮ ಮಾಡುವ ತಂಬುಳಿ, ಅಪ್ಪನೊಂದಿಗೆ ಹಸಿರು ಹಾಸುಗಳಲ್ಲಿ ಸುತ್ತಾಟಗಳ ಕನವರಿಕೆಯಲ್ಲಿ ನನ್ನ ಹುಡುಗನ ಮಾತುಗಳನ್ನು ಮುಳುಗಿಸಿ ಕೇಳಿಯೂ ಕೇಳದವಳಂತೆ ನಾ ಬೆಳೆದ ಮಣ್ಣಿನ ವಾಸನೆಯನ್ನರಸಿ ಹೊರಟು ಬಿಡುತ್ತಿದ್ದೇನೆ. ಕೊನೆಯದಾಗಿ ಅವನಿಗೂ ಹೇಳಿದ್ದೇನೆ.
"ನನ್ನೊಡನೆಯೇ ಬದುಕುವಾಸೆಯಿದ್ದರೆ ನನ್ನ ನೆಲಕ್ಕೇ ಬಾ, ನಾ ಮಲ್ಲಿಗೆ ಬಳ್ಳಿ ನೆಡಲಿದ್ದೇನೆ ಅಲ್ಲಿ, ನೀನು ನೀರೆರೆಯಬಹುದು. ನೆಟ್ಟು ಹೂ ಬಿಟ್ಟಿದ್ದನ್ನು ನೋಡಿ ಇಬ್ಬರೂ ನಗಬಹುದು. ನಾವು ನಕ್ಕಿದ್ದನ್ನು ನೋಡುತ್ತ ನೋಡುತ್ತ ಅಪ್ಪ-ಅಮ್ಮ ಕ್ರಮೇಣ ನಿನ್ನ ಒಪ್ಪಿಕೊಳ್ಳಬಹುದು" ಅಂತ. ಅಷ್ಟೇ ಅಲ್ಲ ಹೀಗೂ ಹೇಳಿದ್ದೇನೆ " ನಂಗೆ ನೀನಿಲ್ಲದೆ ಬೇರೆ ಬದುಕಿಲ್ಲ ಕಣೋ...." ಅಂತ.
‘ಭೂಮಿ ಗುಂಡಗಿದೆ, ಹೇಗೆ ಬಂದರೂ ಸಿಕ್ಕೇ ಸಿಗುತ್ತೇವೆ ಇನ್ನೊಮ್ಮೆ’ ಅಂತ ನಾ ಹೇಳಿದರೆ "Nope, Earth is Geoid " ಅಂತ ಹೇಳಿಕೊಂಡು ಯಾವತ್ತಿನಂತೆ ನಗಲಾರದ ಸ್ಥಿತಿ ಇಬ್ಬರದೂ.

ನಾ ನೆಟ್ಟ ಬಳ್ಳಿಯ ಮಲ್ಲಿಗೆ ಕಂಪು ಅವನನ್ನು ಆವರಿಸಿ ನನ್ನೆಡೆಗೆ ಎಳೆದುಕೊಂಡು ಬರಬೇಕು ಅಂಥ ಮಲ್ಲಿಗೆಬಳ್ಳಿಯೊಂದನ್ನು ನಮ್ಮನೆಯ ಅಂಗಳದಲ್ಲಿ ಬೆಳೆಸುತ್ತೇನೆ, ಆಗವನು ನನ್ನನ್ನು ಹುಡುಕಿಕೊಂಡು ನಮ್ಮನೆಯ ಅಂಗಳದಲ್ಲಿ ನಿಲ್ಲುತ್ತಾನಲ್ಲವಾ?

ಪ್ಯಾಕಿಂಗ್ ಮಾಡುತ್ತ ಪ್ರತಿ ಬಟ್ಟೆಯ ಮಡಿಕೆಯೊಳಗೂ ಅವನಿಗಾಗಿ ಒಂದೊಂದು ಕಂಬನಿಯನ್ನು ಮುತ್ತಂತೆ ಇಟ್ಟು ಬಟ್ಟೆ ಬರೆಗಳನ್ನ ಪ್ಯಾಕ್ ಮಾಡುತ್ತಲಿದ್ದೇನೆ. ಅವನಿಷ್ಟದ ಹಾಲಿನ ಬಣ್ಣದ ಗುಲಾಬಿ ಅಂಚಿನ ಸೀರೆಯೊಂದನ್ನು ಅವನಿಗಾಗಿ ಬಿಟ್ಟು ಹೋಗುತ್ತಿದ್ದೇನೆ. ಅವ ಕೊಡಿಸಿದ ತಂಪು ಬಣ್ಣದ ಟೀ ಶರ್ಟನ್ನೂ ಹಾಗೂ ಅವನದೊಂದು ನೀಲಿಯ ಶರ್ಟನ್ನು ಮರೆಯದೇ ಬ್ಯಾಗಲ್ಲಿ ಸೇರಿಸಿಕೊಂಡಿದ್ದೇನೆ.
ತುಂಬಿದ ಬ್ಯಾಗುಗಳೊಂದಿಗೆ ಖಾಲಿ ಖಾಲಿ ಭಾವಗಳನ್ನು ಹೊತ್ತು ನಡೆಯುತ್ತಿರುವ ನನ್ನನ್ನವನು ಹಿಂಬಾಲಿಸಿ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಾ...ನನ್ನ ನೆಲದೆಡೆಗೆ ಮುಖ ಮಾಡುತ್ತಿದ್ದೇನೆ.



[ ಹೋಗಿಬರುತ್ತೇನೆ. ತಿಂಗಳುಗಳ ಕಾಲ ನನ್ನ ಬ್ಲಾಗ್ ಮರಿಯನ್ನು ಅನಾಥವಾಗಿಸದೇ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ನಿಮ್ಮೆಲ್ಲರ ಮೇಲಿರಿಸಿ ಮರಳುತ್ತಿದ್ದೇನೆ.]

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.