February 20, 2014

ನೇರಳೆ ಬಣ್ಣದ ಜಾಕೆಟ್ಟು...

ತುಂಬ ಮುದ್ದಿನ ಜಾಕೆಟ್ಟು
ತೆಗೆದು ತಲೆದಿಂಬಿನಡಿಯಲ್ಲಿಟ್ಟು
ಮಲಗುತ್ತೇನೆ
`ಬಣ್ಣ ಹೊಳಪು ಕಳಕೊಂಡ ಜಾಕೆಟ್
ಇನ್ನು ತೊಡಬೇಡ ಸಾಕು'
ಎಂಬುದು ಅವನ ಮಾತು
`ತೊಟ್ಟಾಗ ಬಣ್ಣ ಹೊಳಪು
ಕಾಣುವುದಿಲ್ಲ
ಬಂಧ ಬಿಸುಪು ಎರಡೇ ಸಾಕು'
ಎಂಬುದು ನನ್ನ ತಕರಾರು
ಕೊನೆಗೂ ಕೊಟ್ಟಾಯಿತು ಯಾರಿಗೋ
ತುಂಬ ಬೇಕಾದವರಿಗೆ
ಅದೇ ಬಣ್ಣ, ಆ ಹೊಳಪು ಈಗೆಲ್ಲ ನೆನಪು
ಈಗಿನ್ನು ಮತ್ತೆ ಹುಡುಕಬೇಕು
ಯಾವುದಕ್ಕೂ ಕಾಲ ಬರಬೇಕು
ಒಳ್ಳೆಯದು ಬೇಕೆಂದರೆ ಕಾಯಲೇಬೇಕು...

 


ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.