April 22, 2010

ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...

ಅಕ್ಕಿ ಆರಿಸುತ್ತ ಆರಿಸುತ್ತ
ಆರಲಿದ್ದ ದೀಪಕ್ಕೆ ಬತ್ತಿ ಹೊಸೆಯುತ್ತ
ದೀಪಕ್ಕೆಣ್ಣೆ ಹನಿಸುತ್ತ
ಬೆಳಗುವಾಗ ಬೆಳಕಾಗುವಾಗ
ಗೊತ್ತಿರಲಿಲ್ಲ
ಕಣ್ಣಿದ್ದದ್ದು ಎರಡು ಕಂಡಿದ್ದು ಮಾತ್ರ ಒಂದು ಎಂಬುದು
ನೆನಪನ್ನು ಒಂದರಲ್ಲಿ ತುಂಬಿಟ್ಟು
ಕನಸನ್ನು ಇನ್ನೊಂದರಲ್ಲಿಟ್ಟು
ಖುಷಿಪಟ್ಟಾಗ ಗೊತ್ತಿರಲಿಲ್ಲ
ಕನಸು ಕಾಣದೇ ಹೋದದ್ದು

ನಿನ್ನೆ ನಿನ್ನ ಮರೆಯುವದಕ್ಕೆ ಅಂತ
ಡಾಕ್ಟರ ಬಳಿ ಹೋದರೆ
ಕಣ್ಣುಗಳೊಳಗಿಣುಕಿ
ಒಂದರಲ್ಲಿ ಬರೀ ನೆನಪಿದೆ
ಇನ್ನೊಂದು ಖಾಲಿ ಅಂದಾಗಲೇ ಗೊತ್ತಾದ್ದು
ಕನಸುಗಣ್ಣು ಖಾಲಿಯಾಗಿಯೇ ಇದ್ದದ್ದು
ನೆನಪುಗಳನ್ನು ಅಳಿಸಿಕೊಡಿ ಅಂತ ಹೋದರೆ
ಕನಸುಗಳನ್ನು ತುಂಬಿಕೊಡುತ್ತೇನೆ ಅಂದವರಿಗೆ
ನಮಸ್ಕಾರ
ನಿನ್ನ ನೆನಪೇನಾದರೂ ಅಳಿಸಿಹೋದರೆ
ಧನ್ಯವಾದ

ಬಲಕ್ಕೆ ಹೊಸಕಣ್ಣು ಬರುವಾಗ
ನಿನ್ನ ನೆನಪುಗಳು ಎಡವಾಗದಿರಲಿ
ಮತ್ತೆ ಮರಳಿದರೂ ಹೇಳುವುದಿಷ್ಟೇ
ನನಗೆ ನಿನ್ನ ನೆನಪೇ ಇಲ್ಲ
ಆದರೆ ನಾನು ನಿನ್ನನ್ನೆಲ್ಲೋ ನೋಡಿದ್ದೇನೆ
ಆದರೂ ನೆನಪಿನ ಹಂಗು ನನ್ನದಲ್ಲ

April 14, 2010

ಹೈಸ್ಕೂಲಜ್ಜ

ನಂಬಲೇ ಆಗುತ್ತಿಲ್ಲ, ಆದರೂ ವಾಸ್ತವ. ನೆನೆದರೆ ಅಳು ಉಕ್ಕಿ ಬಂದೀತೆಂಬ ಕಾರಣಕ್ಕೆ ನೆನಯದೇ ಒಣಕಣ್ಣುಗಳನ್ನು ಬಿಚ್ಚಿಟ್ಟುಕೊಳ್ಳುವ ಯತ್ನ ಈ ಮೂರುದಿನದಿಂದ.

ಹೈಸ್ಕೂಲಜ್ಜ ಎಂದರೆ ಬೇರಾರೂ ಅಲ್ಲ. ನನ್ನಜ್ಜನ ತಮ್ಮ.
ಗಾಡಿನಿಲ್ಲಿಸುತ್ತಿದ್ದ ಮನೆಯಲ್ಲಿ ಚಿಕ್ಕಂದಿನಿಂದ ನಾವೆಲ್ಲ ಹತ್ತಿ ಕೂತು ನಮ್ಮಗಳ ಬಾಯಲ್ಲಿಯೇ ಸ್ಟಾರ್ಟ್ ಆಗಿ ಸವಾರಿಯೂ ಆಗಿ ಹೈಸ್ಕೂಲಜ್ಜನ ರಾಜದೂತ್ ಮೋಟ್ರುಸೈಕಲ್ಲು ಹಳತಾದ್ದೇನೋ ಅನ್ನಿಸುತ್ತದೆ.
ಮನೆಯ ಮೊಮ್ಮಕ್ಕಳಾದ ನಮಗೆ ಮಾತ್ರವಲ್ಲದೇ ಊರಮಕ್ಕಳಿಗೆಲ್ಲ ಇವರು ಜೆಮ್ಸು ಮತ್ತು ಚಾಕಲೇಟಿನ ಪೊಟ್ಟಣ. ಇವರು ಯಾರಿಗೂ ಒಂದು ಮಾತು ಅಂದದ್ದು ಕಂಡೂ ಇಲ್ಲ, ಕೇಳಿದ್ದೂ ಇಲ್ಲ.
ಜಾತಕವೆಂಬುದು ನಿಜವಾಗುತ್ತದೆಯಾದರೆ ಅದು ಹೈಸ್ಕೂಲಜ್ಜ ನೋಡಿ ಹೇಳಿದ್ದು ಮಾತ್ರ ಅಂತ ದೇವರನ್ನೂ ಮರೆತ ಕ್ಷಣದಲ್ಲೂ ಈ ಮನಸ್ಸು ನಂಬುತ್ತದೆ.
ಮುಂದಕ್ಕೆ ಹೈಸ್ಕೂಲಜ್ಜ ಇಟ್ಟುಕೊಟ್ಟ ಮುಹೂರ್ತಕ್ಕೆ ಮಗನ ಉಪನಯನ ಮಾಡಬೇಕಿತ್ತು. ಹೈಸ್ಕೂಲಜ್ಜ ಇನ್ನಿಲ್ಲ. ಜಾತಕ ನೋಡುವುದನ್ನು ಹೈಸ್ಕೂಲಜ್ಜ ಬಿಟ್ಟ ದಿನದಿಂದ ಜಾತಕವನ್ನೇ ತೋರಿಸುವುದನ್ನು ಬಿಟ್ಟುಬಿಡಬೇಕೆಂದು ತೀರ್ಮಾನವಿತ್ತು. ಗೊತ್ತಿಲ್ಲ.

ನಂಬಲಾಗದಂಥ ವಾಸ್ತವ. ಸುಳ್ಳೇನೋ ಎಂಬ ಭ್ರಮೆ. ಫೋನಲ್ಲಿ ಅಮ್ಮ ಕೂಡ ಹೇಳಿದ್ದು ‘ಮಗಾ... ಹೈಸ್ಕೂಲಜ್ಜ ’ ಅಮ್ಮ ಹೇಳಿದ್ದೆಂದರೇ ನಂಬಲೇ ಬೇಕು. ಇಂಥ ಹೊತ್ತಿನಲ್ಲಿ ಪದೇ ಪದೇ ಅನ್ನಿಸುತ್ತಿದೆ, ಒಂದು ಹೊಳೆಯಾಚೆಯ ಅಂತರದಲ್ಲಿ ತವರೂರು ಇರಬೇಕು ಅಂತ. ಆದರೆ ಹೊಳೆಗೂ ಸಮುದ್ರಕ್ಕೂ ತುಂಬ ಅಂತರ ಅಂತ ಮನಸ್ಸು ಅಳುತ್ತದೆ.

ನಂಬುವುದಾ ಬಿಡುವುದಾ? ವಾಸ್ತವವಾ ಭ್ರಮೆಯಾ? ಕಣ್ಣು ಒಣ ಒಣ, ಕಣ್ಣುರಿ. ನಿನ್ನೆಯಿಂದ ಭರ್ರನೆ ಬೀಸುತ್ತಿರುವ ಗಾಳಿಗೇ ಇರಬೇಕು.

ಎಲ್ಲವೂ ಸುಳ್ಳಾಗಿ ಈ ಬಾರಿಗೆ ಊರಿಗೆ ಹೋದರೆ ಹೈಸ್ಕೂಲಜ್ಜ ಇರಬೇಕು. ಶನಿವಾರ ಹೊರಟುನಿಂತರೆ ‘ಶನಿವಾರ ಪ್ರಯಾಣ ಒಳ್ಳೆಯದಲ್ಲ’ ಅಂದುಬಿಡಬೇಕು ಹೈಸ್ಕೂಲಜ್ಜ. ಸೋಮವಾರ ಕಾಲೇಜಿಗೆ ಹೊರಡುವುದಕ್ಕೆ ಬೆಳಗಿನ ರಾಹುಕಾಲವನ್ನು ಹೈಸ್ಕೂಲಜ್ಜ ನೆನಪಿಸಿ ಏಳಕ್ಕೆ ಮುಂಚೆಯೇ ಮನೆಯ ಹೊರಕ್ಕೆ ಬಂದುಬಿಡಬೇಕು. ಇಲ್ಲವೇ ಬೇಗ ಒಂಬತ್ತುಗಂಟೆಯಾಗಲಿ ಅಂತ ಕಾಯುತ್ತ ಮನೆಯ ತುದಿಕಟ್ಟೆಯಂಚಿಗೆ ಕೂತಿರಬೇಕು. ಮೇ ರಜೆ ಮುಗಿದು ಶಾಲೆ ಯಾವತ್ತಾದರೂ ತೆರಕೊಳ್ಳಲಿ, ನಮಗೆ ಮಾತ್ರ ಗುರುವಾರವೇ ಮೊದಲಾಗಿ ಶಾಲೆ ತೆರಕೊಳ್ಳಬೇಕು. ಊರಿಗೆಲ್ಲ ಕಕ್ಕಯ್ಯ, ಜಯದೇವ ಮಾಸ್ತರು. ನಮಗೆ ಮಾತ್ರ ಯಾವತ್ತೂ ಮಾಸ್ತರೆನಿಸಲೇ ಇಲ್ಲ. ಪ್ರೀತಿ ತುಂಬಿದ ಕಣ್ಣುಗಳ, ಬೆಚ್ಚನೆ ಬೊಗಸೆಯ ಹೈಸ್ಕೂಲಜ್ಜ. ಚಾಕಲೇಟು ಮತ್ತು ಜೆಮ್ಸು. ಕೊಂಡು ತಿಂದರೆ ಆ ರುಚಿ ಬರಲಾರದು. ಅಂಥ ಚಾಕಲೇಟು ಇನ್ನು ಸಿಕ್ಕಲಾರದು.ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.